

ನವದೆಹಲಿ/ರಿಯಾದ್: ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಂಕಷ್ಟ ಸವಾಲು ಕೋವಿಡ್ ಆಗಿದ್ದು, ಕೋವಿಡ್ ನಂತರದ ಹೊಸ ಜಗತ್ತಿನಲ್ಲಿ ಪ್ರತಿಭೆ, ಟೆಕ್ನಾಲಜಿ, ಪಾರದರ್ಶಕತೆ, ಪರಸ್ಪರ ವಿಶ್ವಾಸಗಳೇ ಎಲ್ಲದಕ್ಕೂ ಮಾನದಂಡವಾಗಿರಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ವರು ನಿನ್ನೆ ರಾತ್ರಿ ಜಿ20 ವರ್ಚುವಲ್ ಶೃಂಗದಲ್ಲಿ ಭಾಗವಹಿಸಿ ಮಾತನಾಡಿದರು. ಈ ಶೃಂಗದ ಆತಿಥೇಯತ್ವ ಸೌದಿ ಅರೇಬಿಯ ವಹಿಸಿಕೊಂಡಿದ್ದು, ಅಲ್ಲಿನ ಕಿಂಗ್ ಸಲ್ಮಾನ್ ಶೃಂಗಕ್ಕೆ ಚಾಲನೆ ನೀಡಿದರು. 2022ರಲ್ಲಿ ನಡೆಯಲಿರುವ ಶೃಂಗಕ್ಕೆ ಭಾರತ ಆತೀಥೇಯತ್ವ ವಹಿಸಲಿದೆ.
ಕರೊನೋತ್ತರ ಜಗತ್ತಿನಲ್ಲಿ ಎಲ್ಲಿಂದ ಬೇಕಾದರೂ ಕೆಲಸ ಮಾಡಿ ಎನ್ನುವುದು ಹೊಸ ಸಹಜತೆಯಾಗಿ ರೂಪುಗೊಂಡಿದೆ. ಹೀಗಾಗಿ ವರ್ಚುವಲ್ ಜಿ20 ಸೆಕ್ರಟೇರಿಯೇಟ್ ಒಂದನ್ನು ಅನುಸರಣೆಯ ಕ್ರಮವಾಗಿ ರಚಿಸಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಈ ಶೃಂಗದಲ್ಲಿ ಭಾಗವಹಿಸಿದ ನಂತರದಲ್ಲಿ ಟ್ವೀಟ್ ಮಾಡಿರುವ ಅವರು, ಶೃಂಗದಲ್ಲಿ ಜಿ20 ನಾಯಕರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ಕರೊನಾ ಸಂಕಷ್ಟದಿಂದ ಹೊರಬರುವುದಕ್ಕೆ ಎಲ್ಲ ದೇಶಗಳೂ ಒಟ್ಟಾಗಿ ಪ್ರಯತ್ನಿಸುತ್ತಿದ್ದು, ಶೀಘ್ರವೇ ಪರಿಹಾರ ಸಿಗಲಿದೆ. ಇಂತಹ ಸಂದರ್ಭದಲ್ಲಿ ವರ್ಚುವಲ್ ಶೃಂಗ ಆಯೋಜಿಸಿ ಸೌದಿ ಅರೇಬಿಯಾ ಸಾರ್ಥಕ ಕೆಲಸ ಮಾಡಿದೆ ಎಂದು ಧನ್ಯವಾದ ಹೇಳಿದ್ದಾರೆ. (ಏಜೆನ್ಸೀಸ್)