ಪಿಎಂ ಪೋಷಣ್ ಟೆಂಡರ್ ವಿಳಂಬ: ಶಾಲಾ ಹಂತದಲ್ಲಿಯೇ ಧಾನ್ಯಗಳ ಖರೀದಿಗೆ ಸೂಚನೆ

PM Poshan
Published on

ಬೆಂಗಳೂರು ಪಿಎಂ ಪೋಷಣ್ ಯೋಜನೆ ಅಡಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಬೇಡಿಕೆಯಂತೆ ಆಹಾರ ಧಾನ್ಯಗಳ ಸರಬರಾಜು ಟೆಂಡರ್ ವಿಳಂಬವಾಗಿದ್ದು, ಶಾಲೆಗಳಲ್ಲಿ ಆಹಾರ ಧಾನ್ಯಗಳ ಕೊರತೆಯಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಶಾಲಾ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ.

ಪಿಎಂ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ತೊಗರಿ ಬೇಳೆ ಮತ್ತು ಸೂರ್ಯಕಾಂತಿ ಎಣ್ಣೆಯ ಖರೀದಿ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ನವೆಂಬರ್-2024ರ ಮಾಹೆಗಳ ಡೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯು ಮುಗಿದು ಶಾಲೆಗಳಿಗೆ ಸರಬರಾಜು ಆಗುವವರೆಗೂ ಶಾಲೆಗಳ ಮುಖ್ಯ ಶಿಕ್ಷಕರು ಬಿಸಿಯೂಟಕ್ಕೆ ಅಗತ್ಯವಿರುವ ತೊಗರಿಬೇಳೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸಿ ಬಿಸಿಯೂಟ ನಿಲ್ಲದಂತೆ ಕ್ರಮ ವಹಿಸಲು ಪಿಎಂ ಪೋಷಣ್ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ಷರತ್ತುಗಳೇನು?

ಪ್ರಸ್ತುತ ಶಾಲೆಗಳಿಗೆ ಬಿಡುಗಡೆಗೊಳಿಸಿ ಲಭ್ಯವಿರುವ ಅಡುಗೆ ತಯಾರಿಕಾ ವೆಚ್ಚದ ಸಂಚಿತ ಅನುದಾನದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ದರಗಳ ಮಿತಿಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬೇಕು.

ಶಾಲೆಯಲ್ಲಿ ಅಗತ್ಯವಿರುವ ಆಹಾರ ಧಾನ್ಯಗಳ ಪ್ರಮಾಣ, ಗುಣಮಟ್ಟ, ಸುರಕ್ಷತೆ ಮತ್ತು ಖರೀದಿಸುವ ದರಗಳ ಬಗ್ಗೆ ಶಾಲಾ ಎಸ್‌ಡಿಎಂಸಿ/ಎಸ್‌ಎಂಸಿ ಸೂಕ್ತವಾಗಿ ಪರಿಶೀಲಿಸುವುದು. ಶಾಲಾ ಎಸ್‌ಡಿಎಂಸಿ/ಎಸ್‌ಎಂಸಿ ಅನುಮತಿ ಪಡೆಯುವುದು.

ಧಾನ್ಯಗಳು ಸರಬರಾಜುವಾಗುವ ತನಕ ವಾರಕ್ಕೆ ಒಂದು ಭಾರಿಯಂತೆ ಖರೀದಿಸುವುದು. ಖರೀದಿಸಿದ ಆಹಾರ ಧಾನ್ಯಗಳಿಗೆ ಸೂಕ್ತ ರಶೀದಿಗಳನ್ನು ದಾಖಲೆಯಾಗಿ ಸಲ್ಲಿಸುವುದು.

ಅನಗತ್ಯವಾಗಿ ಹೆಚ್ಚುವರಿಯಾಗಿ ಖರೀದಿ ಮಾಡಬಾರದು ಮತ್ತು ಅಪವ್ಯಯ ಆಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net