ಯೂರೋಪಿನಲ್ಲಿ ಶಾಂತಿ ತರುವ ಬಗ್ಗೆ ರವಿಶಂಕರ ಗುರೂಜಿ ಜತೆ ಐಸ್ ಲ್ಯಾಂಡ್​​ ಪ್ರಧಾನ ಮಂತ್ರಿ ಚರ್ಚೆ

Ravishankar Guruji
Published on

ನವದೆಹಲಿ: ಆರ್ಟ್ ಆಫ್ ಲಿವಿಂಗ್​ನ ಸಂಸ್ಥಾಪಕರೂ ಹಾಗೂ ಜಾಗತಿಕ ಆಧ್ಯಾತ್ಮಿಕ ಗುರುಗಳಾದ ಗುರುದೇವ ಶ್ರೀ ಶ್ರೀ ರವಿಶಂಕರರನ್ನು ಐಸ್ ಲ್ಯಾಂಡಿನ ಪ್ರಧಾನಮಂತ್ರಿಗಳಾದ ಜಾರ್ನಿ ಬೆನಿಡಿಕ್ಟ್ ಸನ್ ರವರು ಇಂದು ರೇಯ್ಜಾವಿಕ್ ನಲ್ಲಿ ಬರಮಾಡಿಕೊಂಡರು. ಪ್ರಸ್ತುತ ಯೂರೋಪಿನಲ್ಲಿ ಶಾಂತಿಯನ್ನು ತರುವ ವಿಷಯದ ಬಗ್ಗೆ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬಗ್ಗೆ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಹೊಂದುವ ಸಲುವಾಗಿ, ವೈಯಕ್ತಿಕ ಕ್ಷೇಮ ಎಷ್ಟು ಮಹತ್ವವಾದದ್ದು ಎಂಬುದರ ಬಗ್ಗೆ ಚರ್ಚಿಸಿದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮಾಡುವ ಕಾರ್ಯಗಳ ಬಗ್ಗೆ ಹಂಚಿಕೊಳ್ಳುತ್ತಾ ಗುರುದೇವರು, ಯಾವುದೇ ರೀತಿಯ ಸವಾಲುಗಳನ್ನು ಗೆದ್ದು ಬರಲು ಧ್ಯಾನ, ಉಸಿರಾಟದ ಪ್ರಕ್ರಿಯೆಗಳ ಮಹತ್ವ, ಹಾಗೂ ಅದರಿಂದ ವ್ಯಕ್ತಿಗಳ ಒತ್ತಡ ಮತ್ತು ಆತಂಕ ನಿವಾರಣೆಯಾಗಿ, ಅದರ ಪರಿಣಾಮ ದೈಹಿಕ ಹಾಗೂ ಮಾನಸಿಕ ಒಳಿತು ಉಂಟಾಗುತ್ತದೆಂದು ವಿವರಿಸಿದರು. ಡೆನ್ಮಾರ್ಕಿನ ಖೈದಿಗಳಿಗೆ ಹಾಗೂ ಗ್ಯಾಂಗ್ ಲೀಡರುಗಳಿಗೆ "ಬ್ರೀತ್ ಸ್ಮಾರ್ಟ್" ಕಾರ್ಯಕ್ರಮ ನಡೆಸಿ, ಅದರಿಂದ ಅವರ ಪುನಶ್ಚೇತನ ಕಾರ್ಯ ನಡೆಯುತ್ತಿರುವುದಾಗಿ ತಿಳಿಸಿದರು. ಈ ಕಾರ್ಯಕ್ರಮಗಳಿಂದ ಅಪರಾಧಿಗಳಲ್ಲಿ ಹಿಂಸೆಯ ಪ್ರಕ್ರಿಯೆ ಹಾಗೂ ಮಾದಕ ವಸ್ತುಗಳ ಸೇವನೆ ಕಡಿಮೆಯಾಗಿ, ಅವರಲ್ಲಿ ಆಂತರಿಕ ಶಾಂತಿ ಹೆಚ್ಚಿದೆ ಹಾಗೂ ಒಬ್ಬರು ಮತ್ತೊಬ್ಬರಿಗೆ ಅಕ್ಕರೆಯನ್ನು ಈಗ ತೋರುತ್ತಿದ್ದಾರೆ ಎಂದು ತಿಳಿಸಿದರು.

ಈ ಭೇಟಿಯಲ್ಲಿ, ಪ್ರಧಾನಮಂತ್ರಿಗಳಾದ ಬೆನಿಡಿಕ್ಟ್ ಸನ್ ರವರು ಪರಿಸರ ಬದಲಾವಣೆಯನ್ನು ಎದುರಿಸಲಿಕ್ಕಾಗಿ ಮಾಡಿರುವ ಅದ್ಬುತ ಕೆಲಸಗಳನ್ನು ಗುರುದೇವರು ಶ್ಲಾಘಿಸಿದರು. ಐಸ್ ಲ್ಯಾಂಡ್ ನ ಪೂರ್ಣ ವಿದ್ಯುಚ್ಛಕ್ತಿಯ ಉತ್ಪಾದನೆಯು ಮರುಬಳಕೆಯ ಮೂಲಗಳಿಂದಲೇ ಬರುತ್ತದೆ ಎಂಬುದು ಅದ್ಭುತ ವಿಷಯ. ಗುರುದೇವರು ಜಿನಿವಾದಲ್ಲಿ ಸಂಯುಕ್ತ ರಾಷ್ಟ್ರಗಳ ಭೇಟಿಯಲ್ಲಿ ಭಾಗವಹಿಸಿ, ಪ್ರಮುಖ ವಕ್ತಾರರಾಗಿ ಭಾಷಣವನ್ನು ನೀಡಿ ನಂತರ ಐಸ್ ಲ್ಯಾಂಡ್ ಗೆ ಭೇಟಿ ನೀಡಿದ್ದಾರೆ. ಇದಾದ ನಂತರ ಗುರುದೇವರು ಅಮೆರಿಕಾದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ.

Ravishankar Guruji
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net