

Union Budget 2025: ಸತತ 8ನೇ ಬಾರಿಗೆ ಕೇಂದ್ರ ಬಜೆಟ್ 2025 ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಜನತೆಗೆ ಒಂದಷ್ಟು ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಇಂದು (ಫೆಬ್ರವರಿ 1) ಸಂಸತ್ತಿನಲ್ಲಿ ವಿತ್ತ ಸಚಿವೆ ಮಂಡಿಸಿದ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಬಜೆಟ್ ಮಂಡನೆ ಮುಕ್ತಾಯಗೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿದ ಮೋದಿ, "ಇಂದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಬಹಳ ಮುಖ್ಯವಾದ ದಿನ. ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಸಂಬಂಧಿಸಿದ ಬಜೆಟ್ ಆಗಿದೆ. ಈ ಬಜೆಟ್ ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ಈಡೇರಿಸುತ್ತದೆ. ಬಜೆಟ್ ಅನೇಕ ಕ್ಷೇತ್ರಗಳಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಈ ಬಜೆಟ್ ಸಾಮಾನ್ಯ ಜನರ ವಿಕಾಸ್ ಭಾರತ್ ಮಿಷನ್ ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ" ಎಂದರು.
"ಸಾಮಾನ್ಯವಾಗಿ, ಬಜೆಟ್ ಸರ್ಕಾರದ ಖಜಾನೆಯನ್ನು ಹೇಗೆ ತುಂಬುವುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಆದರೆ, ಈ ಬಾರಿಯ ಬಜೆಟ್ ಸಾಮಾನ್ಯ ಜನರ ಜೇಬು ತುಂಬುವುದು ಹೇಗೆ ಎಂಬುದರ ಮೇಲೆ ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಯಿತು. ಇಂದಿನ ಕೇಂದ್ರ ಬಜೆಟ್ ದೇಶದ ನಾಗರಿಕರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಇದು ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತದೆ" ಎಂದು ಹೇಳಿದರು.
"ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಬಾಗಿಲು ತೆರೆಯುವಂತಹ ಕ್ರಮಗಳು ಈ ಬಜೆಟ್‌ನಲ್ಲಿ ತಂದಿರುವ ಉತ್ತಮ ಸುಧಾರಣೆಗಳಾಗಿವೆ. ಬಜೆಟ್‌ನಲ್ಲಿ ಸಂಬಳ ಪಡೆಯುವ ಕಾರ್ಮಿಕರಿಗೆ ಆದಾಯ ತೆರಿಗೆಯಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಗಳನ್ನು ತಂದಿದೆ. ಹೊಸ ತೆರಿಗೆ ಪದ್ಧತಿಯಲ್ಲಿ, ಸಂಬಳ ಪಡೆಯುವ ಕಾರ್ಮಿಕರಿಗೆ 12 ಲಕ್ಷ ರೂ.ವರೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಮತ್ತು ಹಳೆಯ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಕಡಿಮೆ ಮಾಡಲಾಗಿದೆ. ಇದರೊಂದಿಗೆ, ಈ ಬಜೆಟ್ ಜನರು ತಮ್ಮ ಕೈಯಲ್ಲಿ ಹೆಚ್ಚುವರಿ ಹಣವನ್ನು ಹೊಂದಲು ಸಹಾಯ ಮಾಡುತ್ತದೆ" ಎಂದು ತಿಳಿಸಿದರು.