

ನವದೆಹಲಿ; ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂಬ ತಮ್ಮ ಪಕ್ಷದ ಬೇಡಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (01) ಮತ್ತೆ ಪುನರುಚ್ಚರಿಸಿದರು. ಜೊತೆಗೆ ಸಾರ್ವಜನಿಕವಾಗಿ ಪ್ರಧಾನಿಯವರ ಇತ್ತೀಚಿನ ಹೇಳಿಕೆ ಹಾಗೂ ರಾಜಕೀಯ ಚಟುವಟಿಕೆಯ ಕುರಿತು ಖರ್ಗೆ ಪ್ರಶ್ನಿ ಎತ್ತಿದರು. ಮೋದಿ ಚುನಾವಣಾ ಪ್ರಚಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದು ದೇಶದ ಮೇಲೆ ಗಮನ ಹರಿಸಬೇಕು. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡು ಮಾತನಾಡಬೇಕು ಎಂದು ಖರ್ಗೆ ಹೇಳಿದರು.
ನಾವು ಯಾವಾಗ ಏನು ಮಾತನಾಡಬೇಕೆಂದು ತಿಳಿದಿರಬೇಕು. ರಾಷ್ಟ್ರೀಯ ವಿಷಯಗಳಲ್ಲಿ ಏಕತೆ ಇರಬೇಕು ಮತ್ತು ನಮ್ಮ ಎದುರಾಳಿಗಳನ್ನು ಸೋಲಿಸುವತ್ತ ಗಮನ ಹರಿಸಬೇಕು. ದೇಶಾದ್ಯಂತದ ಎಲ್ಲಾ ನಾಯಕರು ರಾಷ್ಟ್ರೀಯ ಭದ್ರತೆಯ ವಿಷಯಗಳ ಬಗ್ಗೆ ಮೌನವಾಗಿರಬೇಕು. ಅದರ ಬಗ್ಗೆ ಮಾತನಾಡುವ ಮೊದಲು ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಉತ್ತಮ. ನಿಯೋಗದ ವರದಿಗಳು ಹೊರಬರುವ ಮೊದಲು ಯಾವುದೇ ಚುನಾವಣಾ ಪ್ರಚಾರ ಇರಬಾರದು. ಪ್ರಧಾನಿ ಮೋದಿ ಚುನಾವಣಾ ಭಾಷಣಗಳನ್ನು ನೀಡುವುದನ್ನು ನಿಲ್ಲಿಸಬೇಕು. ಸ್ವಯಂ ಹೊಗಳಿಕೆಯ ಅಗತ್ಯವಿಲ್ಲ, ಇಡೀ ರಾಷ್ಟ್ರವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ ಎಂದು ಹೇಳಿದರು.
ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹಾಗಿರುವಾಗ ಎಲ್ಲವನ್ನು ತಾನೇ ಮಾಡಿದ್ದೇನೆ ಎಂದು ಏಕೆ ಹೇಳಿಕೊಳ್ಳುತ್ತಾರೆ, ಅವರ ಆತ್ಮಸ್ತುತಿ ಒಳ್ಳೆಯದಲ್ಲ ಎಂದು ಟೀಕಿಸಿದರು.
ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ನಡೆಯುತ್ತಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿದ ಖರ್ಗೆ, ಕಾಂಗ್ರೆಸ್ ನಿಯೋಗಗಳು ಸಮಾಲೋಚನೆಗಾಗಿ ವಿದೇಶಗಳಿಗೆ ಪ್ರಯಾಣ ಬೆಳೆಸಿದ್ದವು. ಅವರು ಹಿಂತಿರುಗಲಿ ಅವರು ಹಿಂತಿರುಗುವವರೆಗೆ, ಪ್ರವಾಸ ಮಾಡುವುದು ಮತ್ತು ಭಾಷಣ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.
(ಏಜೆನ್ಸೀಸ್)