ಮುಗಿದ ವನವಾಸ ನೆರವೇರಿದ ಶಿಲಾನ್ಯಾಸ

pm mODI
Published on

ಅಯೋಧ್ಯೆಗೆ ಬಂದ ಪ್ರಧಾನಿ ಮೊದಲು ಹನುಮಾನ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿನ ಗುಹೆಯೊಂದರಲ್ಲಿ ಹನುಮಂತ ನೆಲೆಸಿ, ರಾಮ ಜನ್ಮಭೂಮಿ ಮತ್ತು ರಾಮ ಕೋಟ್​ನ ರಕ್ಷಣೆ ಮಾಡುತ್ತಿದ್ದ ಎಂಬ ಐತಿಹ್ಯವಿದೆ. ಮೋದಿ, ಹನುಮಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪೂಜೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ಬೇರೆ ಕಾರ್ಯಕ್ರಮಕ್ಕೆ ಮುನ್ನ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಮಹತ್ವವಿದೆ ಎಂದಿರುವ ಅಲ್ಲಿನ ಅರ್ಚಕ ರಾಜು ದಾಸ್, ‘ರಾಮನ ಮಹಾನ್ ಭಕ್ತ ಹನುಮನ ಆಶೀರ್ವಾದವಿಲ್ಲದೆ ಯಾವುದೇ ಕೆಲಸ ಪೂರ್ಣಗೊಳ್ಳುವುದಿಲ್ಲ. ಅಯೋಧ್ಯೆ ಕಾಪಾಡುತ್ತಿರುವವನು ಹನುಮಂತ. ಆತನ ಶ್ರೀರಕ್ಷೆಯೂ ಮುಖ್ಯ’ ಎಂದಿದ್ದಾರೆ. ಇಲ್ಲಿ ಹನುಮನ ತಾಯಿ ಅಂಜನಿಯ ದೇಗುಲವಿದ್ದು, ಬಾಲ ಹನುಮಂತ ತನ್ನ ತಾಯಿಯ ತೊಡೆ ಮೇಲೆ ಕುಳಿತಿರುವ ವಿಗ್ರಹ ವಿಶೇಷಾಕರ್ಷಣೆಗೆ ಪಾತ್ರವಾಗಿದೆ.

ಹಿನ್ನೆಲೆ: ಅಯೋಧ್ಯೆಯ ಜೀಣೋದ್ಧಾರ ಮಾಡುವ ಸಮಯದಲ್ಲಿ ರಾಜಾ ವಿಕ್ರಮಾದಿತ್ಯ 360 ಮಂದಿರಗಳನ್ನು ನಿರ್ವಿುಸಿದ್ದ. ಔರಂಗಜೇಬ್ ಅವಧಿಯಲ್ಲಿ ಈ ಮಂದಿರಗಳನ್ನು ನಾಶ ಮಾಡಲಾಯಿತು. ಆ ಬಳಿಕ ಹನುಮಾನಗಢಿ ಪ್ರದೇಶದ ಒಂದು ಮರದಡಿ ಆಂಜನೇಯ ವಿಗ್ರಹವನ್ನು ಪೂಜಿಸಲಾಗುತ್ತಿತ್ತು.

ನವಾಬ ನಿರ್ವಿುಸಿದ ದೇವಸ್ಥಾನ: ಅಯೋಧ್ಯೆಯ ನವಾಬ ಶುಜಾಉದೈಲಾ (ಆಳ್ವಿಕೆ 1739-1754)ನ ಪುತ್ರ ಒಮ್ಮೆ ಅನಾರೋಗ್ಯ ಪೀಡಿತನಾಗಿ, ಗಂಭೀರ ಸ್ಥಿತಿಯಲ್ಲಿದ್ದ. ಆಗ ನವಾಬ್​ನ ಕೋರಿಕೆಯಂತೆ ಮಹಂತ್ ಬಾಬಾ ಅಭಯ್ ರಾಮದಾಸ್ ಭೇಟಿ ನೀಡಿ ಕೆಲ ಮಂತ್ರಗಳನ್ನು ಉಚ್ಚರಿಸಿ, ಹನುಮಾನ ಪಾದದ ಜಲವನ್ನು ಸಿಂಪಡಿಸಿದ್ದರು. ಇದರಿಂದ ನವಾಬ್ ಪುತ್ರನ ಪ್ರಾಣ ಉಳಿಯಿತು. ಆಗ ಖುಷಿಯಿಂದ ಆತ ‘ನಿಮಗೆ ಏನು ಬೇಕೋ ಅದನ್ನು ಕೇಳಿ’ ಎಂದ. ‘ನಾವು ಸಾಧುಗಳು ನಮಗೇನು ಬೇಕು? ನಿಮ್ಮ ಮಗ ಹನುಮನ ಆಶೀರ್ವಾದದಿಂದ ಹುಟ್ಟಿದ್ದಾನೆ. ಹಾಗಾಗಿ, ಹನುಮಾನ ಗಢಿಯನ್ನು ನಿರ್ವಿುಸಿ’ ಎಂದರು. ಅದರಂತೆ ನವಾಬ್ ಜಮೀನು ಒದಗಿಸಿ, ಮಂದಿರ ನಿರ್ಮಾಣ ಮಾಡಿಸಿದ.

ರಾಮಲಲ್ಲಾ ದರ್ಶನ ಪಡೆದ ಮೊದಲ ಪ್ರಧಾನಿ

ಬುಧವಾರ ಬೆಳಗ್ಗೆ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಹನುಮಾನ್​ಗಢಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಅವರು ರಾಮಲಲ್ಲಾ ದರ್ಶನ ಪಡೆದರು. ರಾಮಲಲ್ಲಾ ದರ್ಶನ ಪಡೆದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ಈ ಮೊದಲು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರು ಅಯೋಧ್ಯೆಗೆ ಭೇಟಿ ನೀಡಿದ್ದರು. ಆದರೆ ರಾಮಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ.

ಸಾಷ್ಟಾಂಗ ಪ್ರಣಾಮ: ಹನುಮಾನ್​ಗಢಿಯಿಂದ ರಾಮ ಜನ್ಮಭೂಮಿಗೆ ಆಗಮಿಸಿದ ಪ್ರಧಾನಿ ಮೋದಿ, ರಾಮಲಲ್ಲಾ ದರ್ಶನ ಪಡೆದರು. ರಾಮಲಲ್ಲಾ ಮೂರ್ತಿಗೆ ಅವರು ಸಾಷ್ಟಾಂಗ ಪ್ರಣಾಮ ಸಲ್ಲಿಸಿದರು. ಬಳಿಕ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜತೆ ಭೂಮಿಪೂಜೆ ನಡೆಯುವ ಕಾರ್ಯಕ್ರಮ ಸ್ಥಳಕ್ಕೆ ತೆರಳಿದರು.

ಹನುಮಂತನಿಗೆ ಮೊದಲ ಪೂಜೆ

ಹನá-ಮಾನ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂದಿರದ ವತಿಯಿಂದ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಲಾಯಿತು.

ಗಮನ ಸೆಳೆದ ಧೋತಿ, ಕುರ್ತಾ

ರಾಮಲಲ್ಲಾ ದರ್ಶನಕ್ಕೆ ತೆರಳುವಾಗ ಮೋದಿ ಸಾಂಪ್ರದಾ ಯಿಕ ಧೋತಿ, ಕುರ್ತಾ ಧರಿಸಿದ್ದರು. ಬಂಗಾರ ವರ್ಣದ ಕುರ್ತಾ, ತಿಳಿ ಹಳದಿ ಬಣ್ಣದ ಧೋತಿ ಗಮನ ಸೆಳೆಯಿತು.

ದೈಹಿಕ ಅಂತರ, ಮಾಸ್ಕ್ ಬಳಕೆ

ಕರೊನಾ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಶಿಲಾನ್ಯಾಸದ ವಿಧಿವಿಧಾನ, ಪೂಜೆ ನಡೆಯುವ ಸಂದರ್ಭದಲ್ಲೂ ಸುರಕ್ಷಿತ ಅಂತರ ಕಾಯ್ದುಕೊಳ್ಳ ಲಾಗಿತ್ತು. ಪ್ರಧಾನಿ ಮೋದಿ ಸಹಿತ ಎಲ್ಲ ಗಣ್ಯರು, ಪೂಜೆ ನೆರವೇರಿಸಿದ ಪುರೋಹಿತರು ಮಾಸ್ಕ್ ಧರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net