

Daruma Doll: ಇಂದು ಜಪಾನ್ಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ತಮ್ಮ ಎರಡು ದಿನಗಳ ಪ್ರವಾಸವನ್ನು ಆರಂಭಿಸಿದರು. ಈ ವೇಳೆ ಜಪಾನ್ ಪ್ರಧಾನಿ ಶಿಗೇರು ಇಶಿಬಾರನ್ನು ಭೇಟಿಯಾದ ಅವರು, 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿ, ಹಲವು ವಿಷಯಗಳು ಹಾಗೂ ಮಹತ್ವದ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.
ಟೋಕಿಯೋಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಮೋದಿ ಜಪಾನ್‌ನ ಅತ್ಯಂತ ಪ್ರಸಿದ್ಧ ಅದೃಷ್ಟಶಾಲಿ ಎಂದೇ ಕರೆಯಲ್ಪಡುವ ಹಾಗೂ ಬಹಳ ವಿಶೇಷತೆಗಳನ್ನು ಹೊಂದಿರುವ ದಾರುಮಾ ಗೊಂಬೆಯನ್ನು ಶೋರಿಂಜನ್ ದಾರುಮಾ-ಜಿ ದೇವಾಲಯದ ಮುಖ್ಯ ಅರ್ಚಕರಿಂದ ಉಡುಗೊರೆಯಾಗಿ ಸ್ವೀಕರಿಸಿದರು. ಈ ಗೊಂಬೆಗೆ ದುಂಡಿನ, ಅಗಲವಾದ ಕಣ್ಣುಗಳಿವೆ. ನೋಡುಗರ ಗಮನ ಸೆಳೆಯುವಂತ ಗೊಂಬೆಯ ವಿಶೇಷತೆಗಳೇನು? ಇದನ್ನು ಭಾರತದ ಪ್ರಧಾನಿಗೆ ಹಸ್ತಾಂತರಿಸಿದರ ಉದ್ದೇಶವೇನು? ಎಂಬ ಕೆಲವು ಕೌತುಕದ ಪ್ರಶ್ನೆಗಳಿಗೆ ಹೀಗಿದೆ ಉತ್ತರ.
ದಾರುಮಾ ಗೊಂಬೆಯು ನೋಡಲು ಒಂದು ಚಿತ್ರಿಸಿದ ಗೊಂಬೆಯಂತೆ ಕಾಣುತ್ತದೆ. ಇದು ದುಂಡಾಗಿ, ಕೆಂಪು ಬಣ್ಣದಲ್ಲಿದೆ. ದಿಟ್ಟಿಸುತ್ತಿರುವ ಕಣ್ಣುಗಳನ್ನು ಹೊಂದಿರುವ ಈ ಗೊಂಬೆಗೆ ಆಳವಾದ ಹಿನ್ನೆಲೆಯಿದೆ ಎಂಬುದು ಕುತೂಹಲಕಾರಿ ವಿಷಯ. ಶತಮಾನಗಳ ಹಿಂದೆ ಜಪಾನ್‌ನಲ್ಲಿ ಝೆನ್ ಬೌದ್ಧಧರ್ಮವನ್ನು ಸ್ಥಾಪಿಸಿದ ಬೌದ್ಧ ಸನ್ಯಾಸಿ ಬೋಧಿಧರ್ಮನ ಮಾದರಿಯಲ್ಲಿ ಈ ಪ್ರತಿಮೆಯನ್ನು ತಯಾರಿಸಲಾಗಿದೆ.
ಪ್ರಧಾನಿ ಮೋದಿ ಅವರಿಗೆ ದಾರುಮವನ್ನು ಉಡುಗೊರೆಯಾಗಿ ನೀಡುವುದು ಆಳವಾದ ಅರ್ಥವನ್ನು ಹೊಂದಿದೆ. ಇದು ಕೇವಲ ಸ್ನೇಹಪರ ಸೂಚಕವಲ್ಲ. ಬದಲಿಗೆ ವೈಯಕ್ತಿಕ ಮತ್ತು ರಾಷ್ಟ್ರೀಯ ಗುರಿಗಳಲ್ಲಿ ಯಶಸ್ಸಿನ ಆಶಯವಾಗಿದೆ. ಈ ಗೊಂಬೆಯನ್ನು ಮತ್ತೊಂದು ದೇಶದ ಪ್ರಧಾನಿಗೆ ಅಥವಾ ಅಧ್ಯಕ್ಷರಿಗೆ ನೀಡುವುದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಶ್ವಾಸ ಮತವನ್ನು ಹಂಚಿದಂತೆ ಎಂಬರ್ಥ ಎನ್ನಲಾಗಿದೆ.
ಪ್ರಧಾನಿ ಮೋದಿಯವರ ಈ ಭೇಟಿ ನಿರ್ಣಾಯಕವಾದದ್ದು. ವ್ಯಾಪಾರ, ಹೂಡಿಕೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ಹಲವಾರು ಒಪ್ಪಂದಗಳನ್ನು ಭಾರತ ಮತ್ತು ಜಪಾನ್ ಘೋಷಿಸಲಿವೆ. ಇನ್ನು ಇದೇ ಸಂದರ್ಭದಲ್ಲಿ ವ್ಯಾಪಾರ, ನಿರ್ಣಾಯಕ ತಂತ್ರಜ್ಞಾನ ಮತ್ತು ಇತರ ವಿಷಯಗಳ ಮೂಲಕ ಭಾರತ-ಜಪಾನ್ ದ್ವಿಪಕ್ಷೀಯ ಪಾಲುದಾರಿಕೆಯ ಪ್ರಗತಿ ಕುರಿತು ಮೋದಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಚರ್ಚಿಸಿದರು,(ಏಜೆನ್ಸೀಸ್).