ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜಯಭೇರಿ: ದೀದಿಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

MODI MAMATA
Published on

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿರುವ ಟಿಎಂಸಿ ಪಕ್ಷಕ್ಕೆ ಹಾಗೂ ಈ ಜಯಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಾಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.

ಭಾನುವಾರ ಸಂಜೆ ಟ್ವೀಟ್ ಮಾಡಿರುವ ಮೋದಿ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಜಯಗಳಿಸಿರುವುದಕ್ಕೆ ಮಮತಾ ಬ್ಯಾನರ್ಜಿ ಅವರಿಗೆ ಶುಭಾಶಯ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರವೂ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ, ಸಹಾಯ, ಸಹಕಾರ ನೀಡುತ್ತದೆ. ಅಲ್ಲದೇ ಕೋವಿಡ್ 19 ತಡೆಗಟ್ಟುವಲ್ಲಿ ನಿಮ್ಮೊಂದಿಗೆ ಸೇರಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆಲ್ಲುವ ಮೂಲ ದೊಡ್ಡ ಮಟ್ಟದ ಸಾಧನೆ ಮಾಡಿರುವುದಕ್ಕೆ ಬಂಗಾಳ ಜನತೆಗೆ ಮೋದಿ ಧನ್ಯವಾದ ತಿಳಿಸಿದ್ದು, ಕೇವಲ ಮೂರು ಸ್ಥಾನಗಳಿಂದ ಇಂದು ಬಂಗಾಳದಲ್ಲಿ 78 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಬಂಗಾಳದಲ್ಲಿ 222 ಸ್ಥಾನಗಳಲ್ಲಿ ಟಿಎಂಸಿ ವಿಜಯಶಾಲಿಯಾಗಿದ್ದರೇ, 78 ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.

ತಮಿಳುನಾಡು ಫಲಿತಾಂಶದ ಕುರಿತು ಡಿಎಂಕೆ ಹಾಗೂ ಡಿಎಂಕೆ ಮುಖಂಡ ಸ್ಟಾಲಿನ್ ಅವರಿಗೆ, ಕೇರಳ ಫಲಿತಾಂಶದ ಕುರಿತು ಪಿಣರಾಯಿ ವಿಜಯನ್ ಅವರಿಗೆ ಹಾಗೂ ಅಸ್ಸಾಂ, ಪುದುಚೇರಿ ಬಿಜೆಪಿ ಮುಖಂಡರಿಗೆ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net