'ಪ್ರಧಾನಿಯವರಿಂದ ಒಂದು ದಾಖಲೆ...': ಅ.7ರ ವಿಶೇಷತೆ ಹೇಳಿ, ಮೋದಿಯನ್ನು ಹೊಗಳಿದ ಅಮಿತ್​ ಷಾ

Modi And Shah
Published on

ನವದೆಹಲಿ: ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ನರೇಂದ್ರ ಮೋದಿಯವರು ಇಂದಿಗೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಷಾ ಪ್ರಧಾನಿಯವರನ್ನು ಹೊಗಳಿ, ಶುಭ ಹಾರೈಸಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಸತತ 13 ವರ್ಷ (2001 ರ ಅಕ್ಟೋಬರ್​ 7ರಿಂದ) ಅಧಿಕಾರ ನಡೆಸಿದರು. ಅದಾದ ಬಳಿಕ ಮೊದಲ ಅವಧಿಯ ಪ್ರಧಾನಿ ಹುದ್ದೆಯ ಐದು ವರ್ಷ ಕಳೆದು..ಎರಡನೇ ಅವಧಿಯ 2ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಅಕ್ಟೋಬರ್ 7ಕ್ಕೆ ಮೋದಿಯವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ 20 ವರ್ಷ ಕಳೆದಿವೆ. ಇದು ಒಂದು ದಾಖಲೆಯೂ ಹೌದು.

ಅಮಿತ್​ ಷಾ ಅವರು ಟ್ವೀಟ್​ ಮಾಡಿದ್ದು, ದೇಶದ ಇತಿಹಾಸದಲ್ಲಿ ಅಕ್ಟೋಬರ್​ 7 ಪ್ರಮುಖ ದಿನವಾಗಲಿದೆ. 2001ರ ಇದೇ ದಿನ ನರೇಂದ್ರ ಮೋದಿಯವರು ಗುಜರಾತ್​​ನ ಮುಖ್ಯಮಂತ್ರಿಯಾಗಿ ಮೊದಲಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಅಂದಿನಿಂದಲೂ ವಿಶ್ರಾಂತಿ ಪಡೆಯದೆ ದೇಶಕ್ಕಾಗಿ, ಜನರಿಗಾಗಿ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಇದನ್ನೂ ಓದಿ: ರಸಾಯನ ಶಾಸ್ತ್ರದ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ

ಪ್ರತಿದಿನವೂ ಒಂದೊಂದು ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದ್ದಾರೆ. ಇದೀಗ 20 ವರ್ಷ ಕಳೆಯಿತು ಎಂದು ಹೇಳಿದ್ದಾರೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ, 20 ವರ್ಷ ನಿರಂತರವಾಗಿ ಚುನಾಯಿತ ಸರ್ಕಾರಗಳ ಮುಖ್ಯಸ್ಥನಾಗಿ ದೇಶ, ಜನರ ಸೇವೆ ಮಾಡಿದ ಮೊದಲ ವಿಶ್ವನಾಯಕ ಎಂಬ ಹೆಗ್ಗಳಿಕೆಗೂ ಪ್ರಧಾನಿ ನರೇಂದ್ರ ಮೋದಿ ಇಂದು ಭಾಜನರಾಗಿದ್ದಾರೆ.

ಇಂದು ಮೋದಿಯವರಿಗೆ ಶುಭ ಹಾರೈಸಿದ ಅಮಿತ್ ಷಾ, 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರ ಹಿಡಿದಿದ್ದೇ ನರೇಂದ್ರ ಮೋದಿಯವರಿಂದ. 2014ರಲ್ಲಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ, ಜನರೂ ನಂಬಿಕೆ ಇಟ್ಟು ಅವರನ್ನು ಬೆಂಬಲಿಸಿದರು. ಆ ನಂಬಿಕೆಯನ್ನು ಮೋದಿಯವರು ಉಳಿಸಿಕೊಂಡರು ಎಂದು ಹೊಗಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net