ಬಿಹಾರ ಸಿಎಂ ಹುದ್ದೆಯನ್ನು RJDಯು ಕಾಂಗ್ರೆಸ್​ನಿಂದ ಕಸಿದುಕೊಂಡಿದೆ ಎಂಬ ಪ್ರಧಾನಿ ಮೋದಿ ಮಾತು ಸುಳ್ಳು: ಮಲ್ಲಿಕಾರ್ಜುನ ಖರ್ಗೆ ತಿರುಗೇಟು | Mallikarjun Kharge

Mallikarjun Kharge
Published on: 

ನವದೆಹಲಿ: ಬಿಹಾರದ RJDಯು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಹುದ್ದೆಯನ್ನು ಕದ್ದಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಸೋಮವಾರ (ನ,3) ನಿರಾಕರಿಸಿದ್ದಾರೆ. ಅಲ್ಲದೆ ಸಿಎಂ ಹುದ್ದೆಯ ಕಿತ್ತಾಟವು ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಬಿರುಕು ಮೂಡುವಂತೆ ಮಾಡಿದೆ ಪ್ರಧಾನಿ ಹೇಳಿದ್ದರು.

ಈ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಖರ್ಗೆ, ಇದೆಲ್ಲವೂ ಸುಳ್ಳು. ಪ್ರಧಾನಿ ಮೋದಿಗೆ ಹೇಳಲು ಬೇರೆ ವಿಷಯವಿಲ್ಲ ಏನೂ ಇಲ್ಲ. ನಾನು ಇಂದು ಬಿಹಾರದಲ್ಲಿ ಇದಕ್ಕೆ ಉತ್ತರಿಸುತ್ತೇನೆ. ಮೋದಿ ಹೇಳುತ್ತಿರುವುದು ಸುಳ್ಳು. ಬಂದೂಕಿನಿಂದ ಗುರಿಯಿಟ್ಟು ಮುಖ್ಯಮಂತ್ರಿ ಮಾಡಿ ಎಂದು ಯಾರೂ ಬೇರೆಯವರಿಗೆ ಹೇಳುವುದಿಲ್ಲ. ಕಾಂಗ್ರೆಸ್ ಎಂದಿಗೂ ಹೀಗೆ ಮಾಡಿಲ್ಲ ಎಂದು ತಿಳಿಸಿದರು.

ಮೋದಿಯು ಈ ದೇಶದ ಪ್ರಧಾನಿಯಾಗಿದ್ದಾರೆ. ಇವರು ಇಂತಹ ಮಾತುಗಳನ್ನು ಹೇಳುವುದು ನಗೆಪಾಟಲಿಗೆ ಈಡಾಗುವಂತಹದ್ದು. ಇದು ಮೋದಿಯ ಮಟ್ಟವನ್ನು ತೋರಿಸುತ್ತದೆ. ಪ್ರಧಾನಿಯೊಬ್ಬರು ಮಾತನಾಡಬೇಕಾದ ಮಟ್ಟವನ್ನು ಬದಿಗಿಟ್ಟು ಬಿಹಾರದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾರೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಹೇಳಿದ್ದೇನು..?

ಪ್ರಧಾನಿ ಮೋದಿ ಬಿಹಾರದ ಅರ್ರಾದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಯನ್ನು ಕದ್ದಿದೆ ಎಂದು ಹೇಳಿಕೊಂಡ ಒಂದು ದಿನದ ನಂತರ ಖರ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ, ಈ ಒತ್ತಡದ ನಡುವೆ ಮಹಾಘಟಬಂಧನ್ ತೇಜಸ್ವಿ ಯಾದವ್​ರನ್ನು ತಮ್ಮ ಸಿಎಂ ಅಭ್ಯರ್ಥಿಯಾಗಿ ಘೋಷಿಸುವಂತೆ ಬಲವಂತಪಡಿಸಲಾಗಿದೆ.

ವಿಕಸಿತ ಬಿಹಾರಕ್ಕಾಗಿ ಇಂದು ಇಡೀ ಎನ್‌ಡಿಎ ಒಟ್ಟಾಗಿ ಮುಂದುವರಿಯುತ್ತಿದೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ ಮತ್ತು ಆರ್‌ಜೆಡಿ ಹೋರಾಡುತ್ತಿವೆ. ಇಂದು ನಾನು ನಿಮಗೆ ಆಂತರಿಕ ಮಾಹಿತಿಯನ್ನು ಹೇಳುತ್ತೇನೆ. ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು, ಮುಚ್ಚಿದ ಬಾಗಿಲುಗಳ ಹಿಂದೆ ಗೂಂಡಾಗಿರಿ ನಡೆಯುತ್ತಿತ್ತು. ಕಾಂಗ್ರೆಸ್‌ಗೆ ಆರ್‌ಜೆಡಿ ಸಿಎಂ ಇರಬೇಕೆಂದು ಇಷ್ಟವಿರಲಿಲ್ಲ, ಆದರೆ ಆರ್‌ಜೆಡಿ ಆ ಅವಕಾಶವನ್ನು ಬಿಡಲಿಲ್ಲ. RJD ಕಾಂಗ್ರೆಸ್ ತಲೆಯ ಮೇಲೆ ಬಂದೂಕು ಇಟ್ಟು ಸಿಎಂ ಹುದ್ದೆಯನ್ನು ಕದ್ದರು ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)