ಶ್ರೀಗಂಧದಲ್ಲಿ ಮೂಡಿದ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿ: ಪ್ರಧಾನಿ ಮೋದಿಗಾಗಿ ವಿಶೇಷ ಗಿಫ್ಟ್​

Gift for PM Modi
Published on

ಶಿವಮೊಗ್ಗ: ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು ಇಂದು (ಫೆ.27) ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ವಿಶೇಷವಾದ ಉಡುಗೊರೆಯೊಂದು ತಯಾರಾಗಿದೆ.

ಪ್ರಧಾನಿ ಮೋದಿಗೆ ಶ್ರೀಗಂಧದ ಉಡುಗೊರೆ ರೆಡಿಯಾಗಿದ್ದು, ವಿಮಾನ ನಿಲ್ದಾಣದ ಟರ್ಮಿನಲ್ ಮಾದರಿಯನ್ನು ಕಲಾವಿದರು ಶ್ರೀಗಂಧದಲ್ಲಿ ನಿರ್ಮಾಣ ಮಾಡಿದ್ದಾರೆ. ಇದುವರೆಗೂ ಯಾರೂ ಪಡೆಯದ ವಿನೂತನ ಉಡುಗೊರೆಯನ್ನು ಪ್ರಧಾನಿ ಮೋದಿ ಪಡೆಯಲಿದ್ದಾರೆ.

Special Gift for PM Modi

ಶ್ರೀಗಂಧದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯ ಪ್ರತಿಕೃತಿ ನಿರ್ಮಾಣವಾಗಿದ್ದರೆ, ಸ್ಮರಣಿಕೆಯ ಕೆಳಭಾಗವನ್ನು ಬೀಟೆ ಹಾಗೂ ಶಿವನೆ ಮರದಿಂದ ತಯಾರಿಸಲಾಗಿದೆ. ಸಾಗರದ ಕಲಾವಿದರು ಈ ವಿಶೇಷ ಕಲಾಕೃತಿ ಸೃಷ್ಟಿಸಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿಗೆ ಶಿವಮೊಗ್ಗ ಜನತೆಯ ಪರವಾಗಿ ವಿಶೇಷ ಉಡುಗೊರೆ ನೀಡಲಾಗುತ್ತದೆ.

ಶ್ರೀಗಂಧದ ಸ್ಮರಣಿಕೆಯ ಜೊತೆಗೆ ಅಡಕೆ ಹಾಳೆಯಲ್ಲಿ ಮಾಡಿರುವ ಪೇಟ ಹಾಗೂ ಅಡಕೆಯಲ್ಲಿ ಮಾಡಿರುವ ಹಾರ ಹಾಕಿ ಸನ್ಮಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಡಕೆ ಮಲೆನಾಡಿನ ಟ್ರೇಡ್ ಮಾರ್ಕ್ ಆಗಿರುವುದರಿಂದ ಅಡಕೆ ಹಾಳೆಯಲ್ಲಿ ತಯಾರಿಸಿರುವ ಪೇಟ ಹಾಗೂ ಅಡಕೆ ಹಾರ ಹಾಕಿ ಪ್ರಧಾನಿಯನ್ನು ಸನ್ಮಾನಿಸಲಾಗುತ್ತಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ವಿಮಾನ ನಿಲ್ದಾಣ ಮುಂಭಾಗದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಬೃಹತ್ ಪೆಂಡಾಲ್​ನಲ್ಲಿ ಒಂದು ಲಕ್ಷ ಅಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು ಎರಡು ಲಕ್ಷ ಜನರು ಸೇರುವ ನೀರೀಕ್ಷೆ ಇದೆ. ಬೆಳಗ್ಗಿನಿಂದಲೇ ಜನರು ಸಮಾವೇಶದತ್ತ ಬರುತ್ತಿರುದ್ದಾರೆ. ಬೆಳಗ್ಗೆ 11.35ರ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಿ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

Special Gift for PM Modi

ಪ್ರಧಾನಿ ಮೋದಿಯವರನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಅವರು ಬರಮಾಡಿಕೊಳ್ಳಲ್ಲಿದ್ದಾರೆ. 25 ನಿಮಿಷಗಳ ಕಾಲ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನೆ ಸೇರಿದಂತೆ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಮಾವೇಶದ ಮೈದಾನದತ್ತ ಮೋದಿ ಬರಲಿದ್ದು, ಮಧ್ಯಾಹ್ನ 1.15 ಗಂಟೆಯವರೆಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30ರ ವೇಳೆಗೆ ಶಿವಮೊಗ್ಗ ದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net