ಭಾರತೀಯರ ಗೌರವ ಕಾಪಾಡಲು ದ್ವೇಷ ಭಾಷಣ ವ್ಯಾಖ್ಯಾನದ ವಿಸ್ತರಣೆ ಅಗತ್ಯ ಇದೆ : ಪ್ರಧಾನಿ ನರೇಂದ್ರ ಮೋದಿ

Modi 1 Feb 20
Published on

ನವದೆಹಲಿ: ದ್ವೇಷ ಭಾಷಣದ ವ್ಯಾಖ್ಯಾನದಲ್ಲಿ ಅಂತರ ಪ್ರಾದೇಶಿಕ ಘರ್ಷಣೆ ಪ್ರಚೋದಿಸುವ ಹೇಳಿಕೆಗಳನ್ನು ಸೇರಿಸಿ ವ್ಯಾಖ್ಯಾನವನ್ನು ವಿಸ್ತರಣೆ ಮಾಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೊಲೀಸರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಡಿಸೆಂಬರ್‌ನಲ್ಲಿ ನಡೆದ ರಾಜ್ಯ ಪೊಲೀಸ್ ಮುಖ್ಯಸ್ಥರು, ಗುಪ್ತಚರ ಹಾಗೂ ತನಿಖಾ ಸಂಸ್ಥೆಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ದ್ವೇಷ ಭಾಷಣದ ವ್ಯಾಖ್ಯಾನ ವಿಸ್ತರಿಸಬೇಕು ಎಂದು ಹೇಳಿದರು.
ಭಾರತೀಯ ನಾಗರಿಕರ ಗೌರವ ಮತ್ತು ಘನತೆ ಕಾಪಾಡಲು ದ್ವೇಷ ಭಾಷಣ ವ್ಯಾಖ್ಯಾನವನ್ನು ವಿಸ್ತರಣೆ ಮಾಡಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಪೊಲೀಸರು, ಗುಪ್ತಚರ ಸಂಸ್ಥೆಗಳು ಮುಂದಾಗಬೇಕು ಎಂದು ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ದ್ವೇಷ ಭಾಷಣದ ವ್ಯಾಖ್ಯಾನ ವಿಸ್ತಾರವಾದರೆ ಅನ್ಯಾಯಕ್ಕೆ ಒಳಗಾದ ನಾಗರಿಕರ ಗೌರ ಮತ್ತು ಘನತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಅವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಪಕ್ಷಗಳ ಸೂಚನೆ ಮೇರೆಗೆ ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲೆ ನಡೆದ ದಾಳಿ, ಖಲಿಸ್ತಾನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನೀಡಿದ ಹೇಳಿಕೆಗಳನ್ನು ಪ್ರಧಾನಮಂತ್ರಿ ಉದಾಹರಣೆ ನೀಡಿ. ಇಂತವುಗಳನ್ನು ತಡೆಯಲು ಕಾಯ್ದೆಗೆ ತಿದ್ದುಪಡಿ ಅಗತ್ಯ ಎಂದು ತಿಳಿಸಿದರು.

ಯಾವುದೇ ಪ್ರಕಟಣೆ, ಸಾಮಾಜಿಕ ಜಾಲತಾಣ ಹಾಗೂ ವ್ಯಂಗ್ಯ ಚಿತ್ರಗಳು ಪ್ರಾದೇಶಿಕ ಘರ್ಷಣೆ ಹಾಗೂ ದ್ವೇಷದ ಭಾವನೆ ಉಂಟು ಮಾಡಿದರೆ ಅವುಗಳನ್ನು ಪರಿಷ್ಕೃತ ವ್ಯಾಖ್ಯಾನದಲ್ಲಿ ಸೇರಿಸಹುದಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದ್ವೇಷದ ಭಾಷಣಕ್ಕೆ ಸಂಬಂಧಿಸಿದ ಪ್ರಸ್ತುತ ಕಾನೂನುಗಳನ್ನು, ಬದಲಾವಣೆ ಮಾಡುವ ಅಗತ್ಯ ಇದೆಯೇ ಅಥವಾ ಇರುವ ಕಾನೂನಿನಲ್ಲೇ ಸಮರ್ಪಕವಾಗಿ ನಿಯಂತ್ರಣ ಮಾಡಬಹುದೇ ಎಂದು ಪರಿಶೀಲನೆ ಮಾಡಿದ ನಂತರ ವ್ಯಾಖ್ಯಾನ ವಿಸ್ತರಣೆಗೆ ನಿರ್ಧಾರ ಮಾಡಲಾಗುವುದು ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net