

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ 95ನೇ ವರ್ಷದ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಮೋದಿ ಜತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತೆರಳಿದ್ದಾರೆ.
ಜನ್ಮದಿನದಂದು ಆಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋವನ್ನು ಮೋದಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಭಾರತದ ಅಭಿವೃದ್ಧಿಯಲ್ಲಿ ಆಡ್ವಾಣಿ ಅವರ ಕೊಡುಗೆ ಸ್ಮರಣೀಯವಾದುದು. ಅವರ ದೂರದೃಷ್ಟಿ ಹಾಗೂ ಬುದ್ಧಿವಂತಿಕೆಯ ಕಾರಣಕ್ಕಾಗಿ ಅವರನ್ನು ಇಂದು ದೇಶವೇ ಗೌರವಿಸುತ್ತಿದೆ. ಬಿಜೆಪಿಯನ್ನು ರಾಷ್ಟ್ರೀಯ ಪಕ್ಷವಾಗಿ ಕಟ್ಟಿ ಬೆಳೆಸಿ, ಬಲಪಡಿಸುವಲ್ಲಿ ಅಡ್ವಾಣಿ ಅವರ ಪಾತ್ರ ಪ್ರಮುಖವಾದುದು. ಅವರ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದು ಮೋದಿ ಬರೆದುಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿ, 'ರಾಷ್ಟ್ರ ಮತ್ತು ಸಂಘಟನೆಗಾಗಿ ಆಡ್ವಾಣಿ ಅವರ ಜೀವನವು ನಮಗೆಲ್ಲಾ ಸ್ಫೂರ್ತಿಯಾಗಿದೆ' ಎಂದಿದ್ದಾರೆ.(ಏಜೆನ್ಸೀಸ್)