

PM Modi: ಭಾರತದ ಮೇಲೆ ಅಮೆರಿಕಾ ಸುಂಕ ಸಮರದ ನಡುವೆಯೂ ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವಸಂಸ್ಥೆಯ 80ನೇ ಅಧಿವೇಶನದಲ್ಲಿ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಬುಧವಾರ(ಆಗಸ್ಟ್ 13) ವರದಿಯಾಗಿದೆ.
ಭಾರತದ ರಪ್ತಿನ ಮೇಲೆ ಮೊದಲು ಶೇ. 25ರಷ್ಟು ಸುಂಕ ವಿಧಿಸಿದ್ದ ಟ್ರಂಪ್, ರಷ್ಯಾದಿಂದ ತೈಲ ಖರೀದಿಗಾಗಿ ಹೆಚ್ಚುವರಿಯಾಗಿ ಶೇ. 25ರಷ್ಟು ವಿಧಿಸಿದೆ. ಒಟ್ಟು ಶೇ. 50ರಷ್ಟು ಸುಂಕವನ್ನು ವಿಧಿಸಿದ್ದು, ಇದೇ ಆಗಸ್ಟ್ 27ರಿಂದ ಈ ನೀತಿ ಜಾರಿಗೆ ಬರಲಿದೆ. ಈ ನಡುವೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಸಾಮಾನ್ಯ ಸಭೆಯ ಭಾಷಣಕಾರರ ತಾತ್ಕಾಲಿಕ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರಿದ್ದು, ಅಮೆರಿಕಾ ಪ್ರವಾಸ ಕೈಗೊಳ್ಳುವ ನಿರೀಕ್ಷಿಯಿದೆ ಎನ್ನಲಾಗಿದೆ.
ಸೆಪ್ಟೆಂಬರ್ 9ರಿಂದ ಯುಎನ್ಜಿಎಯ 80ನೇ ಅಧಿವೇಶನ ಆರಂಭವಾಗಲಿದೆ. ಉನ್ನತ ಮಟ್ಟದ ಸಾಮಾನ್ಯ ಸಭೆಯ ಚರ್ಚೆಯು ಸೆಪ್ಟೆಂಬರ್ 23ರಿಂದ 29ರವರೆಗೆ ನಡೆಯಲಿದೆ. ಅಧಿವೇಶನದ ಸಾಂಪ್ರದಾಯಿಕ ಮೊದಲ ಭಾಷಣಕಾರರಾಗಿ ಬ್ರೆಜಿಲ್ ಮುಖ್ಯಸ್ಥರು ಮಾಡಲಿದ್ದು, ನಂತರ ಅಮೆರಿಕಾ ಮುಖ್ಯಸ್ಥರು ಮಾಡಲಿದ್ದಾರೆ. ಸೆಪ್ಟೆಂಬರ್ 23 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾನ್ಯ ಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ 2ನೇ ಅವಧಿಯ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮೊದಲ ಭಾಷಣವಾಗಿರಲಿದೆ.
ಸೆಪ್ಟೆಂಬರ್ 26ರಂದು ಭಾರತದ ಪ್ರಧಾನಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅದೇ ದಿನ ಇಸ್ರೇಲ್, ಚೀನಾ, ಪಾಕಿಸ್ತಾ, ಬಾಂಗ್ಲಾ ದೇಶದ ಮುಖ್ಯಸ್ಥರು ಮಾತನಾಡಲಿದ್ದಾರೆ. ಆದರೆ ಈ ಭಾಷಣಕಾರರ ಪಟ್ಟಿ ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಪಟ್ಟಿಯನ್ನು ನವೀಕರಿಸಲಾಗುತ್ತದೆ ಎಂದು ವರದಿಯಾಗಿದೆ.
ಫೆಬ್ರುವರಿಯಲ್ಲಿ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ವ್ಯಾಪಾರ ಒಪ್ಪಂದಗಳಿಗೆ ಜಂಟಿ ಸಹಿ ಹಾಕಿದ್ದರು. ಈ ನಡುವೆ ಆಪರೇಷನ್ ಸಿಂಧೂರ ಬಳಿಕ ಟ್ರಂಪ್ ಪಾಕ್ ಜೊತೆ ಸ್ನೇಹ ವ್ಯಾಪಾರ ಘೋಷಿಸಿದ್ದು, ಭಾರತದ ಮೇಲೆ ಶೇ. 25ರಷ್ಟು ಸುಂಕವನ್ನು ಘೋಷಣೆ ಮಾಡಿದ್ದರು. ಜೊತೆಗೆ ರಷ್ಯಾ ಜೊತೆಗೆ ಭಾರತ ತೈಲ ಖರೀದಿ ಹಿನ್ನೆಲೆ ಹೆಚ್ಚುವರಿಯಾಗಿ ಮತ್ತೆ ಶೇ. 25ರಷ್ಟು ಸುಂಕ ಘೋಷಿಸಿದ್ದು, ಅದು ಆಗಸ್ಟ್ 27ರಿಂದ ಜಾರಿಗೆ ಬರಲಿದೆ.
ಟ್ರಂಪ್ ಸುಂಕ ನೀತಿಗೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ದೇಶವನ್ನು ಗುರಿ ಮಾಡಿ ಸುಂಕ ವಿಧಿಸುವುದು ಅಸಮರ್ಥನೀಯ, ಅಸಮಂಜಸ ಎಂದಿದ್ದು, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡುವ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೆ ಎಂದು ಹೇಳಿದೆ. (ಏಜೆನ್ಸೀಸ್)