ತಮ್ಮ ಮುಖದ ಕಾಂತಿಗೆ ಕಾರಣವೇನು ಎಂಬ ಗುಟ್ಟನ್ನು ಬಾಲ ಪುರಸ್ಕಾರ ಪಡೆದ ಮಕ್ಕಳೆದುರು ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ...

Modi 24 Jan 20
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮುಖದ ಕಾಂತಿಗೆ ಕಾರಣವೇನು? ಮೋದಿ ಮೇಕಪ್​ ಮಾಡುತ್ತಾರಾ? ಎಂಬಿತ್ಯಾದಿ ವಿಷಯಗಳು ಈಗಾಗಲೇ ಕೆಲವು ಬಾರಿ ಚರ್ಚೆಗೆ ಬಂದಿದ್ದವು.

ಕಳೆದ ಏಪ್ರಿಲ್​ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉಡುಪಿಯಲ್ಲಿ ನಡೆದ ಪ್ರಚಾರಸಭೆಯಲ್ಲಿ ಕೂಡ ಮೋದಿಯವರ ಮುಖದ ಹೊಳಪಿನ ಬಗ್ಗೆ ಮಾತನಾಡಿದ್ದರು. ನರೇಂದ್ರ ಮೋದಿ ಬೆಳಗ್ಗೆ ವ್ಯಾಕ್ಸ್​ ಮಾಡಿಸಿಕೊಂಡು ಮನೆಯಿಂದ ಹೊರಡುತ್ತಾರೆ. ಹಾಗಾಗಿ ಅವರ ಮುಖ ಫಳಫಳ ಹೊಳೆಯುತ್ತದೆ ಎಂದು ಟೀಕಾತ್ಮಕವಾಗಿ ಹೇಳಿದ್ದರು.

ಆದರೆ ನರೇಂದ್ರ ಮೋದಿಯವರು ಇದೀಗ ತಮ್ಮ ಮುಖದ ಕಾಂತಿಗೆ ಏನು ಕಾರಣ ಎಂಬುದನ್ನು ಹೇಳಿಕೊಂಡಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ಮಾತುಕತೆ ನಡೆಸಿದ ಮೋದಿಯವರು ತಮ್ಮ ಮುಖದಲ್ಲೇಕೆ ಅಷ್ಟು ತೇಜಸ್ಸು ಇದೆ ಎಂಬುದಕ್ಕೆ ಕಾರಣ ಹೇಳಿದ್ದಾರೆ.

ಹಲವು ವರ್ಷಗಳ ಹಿಂದೆ ಹೀಗೆ ಯಾರೋ ಒಬ್ಬರು ನನ್ನ ಬಳಿ ಕೇಳಿದ್ದರು. ನಿಮ್ಮ ಮುಖ ಇಷ್ಟೊಂದು ಕಾಂತಿಯುಕ್ತವಾಗಿರಲು ಕಾರಣ ಏನು ಎಂದು ಪ್ರಶ್ನಿಸಿದ್ದರು. ಆಗ ನಾನು ತುಂಬ ಸರಳವಾಗಿ ಉತ್ತರಿಸಿದೆ.

ನಾನು ಶ್ರಮಪಟ್ಟು ಕೆಲಸ ಮಾಡುತ್ತೇನೆ. ಆಗ ನನ್ನ ಮುಖದಲ್ಲಿ ಬೆವರು ಬರುತ್ತದೆ. ಹಾಗೆ ಬೆವರು ಸುರಿದಾಗ ನಾನು ನನ್ನ ಮುಖವನ್ನು ಒರೆಸಿಕೊಳ್ಳುತ್ತೇನೆ. ಈ ಶ್ರಮದ ಬೆವರೇ ನನ್ನ ಮುಖದ ಹೊಳಪನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಅದು ಸತ್ಯ ಕೂಡ ಎಂದು ನರೇಂದ್ರ ಮೋದಿ ಮಕ್ಕಳಿಗೆ ತಿಳಿಸಿದರು.

ಪ್ರಧಾನಿ ಮೋದಿಯವರು ಮಕ್ಕಳಿಗೆ ಶ್ರಮಪಟ್ಟು ಮಾಡುವ ಕೆಲಸದ ಮಹತ್ವವನ್ನು ವಿವರಿಸುತ್ತ ಹೀಗೆ ಹೇಳಿದರು. ಪ್ರಾಮಾಣಿಕವಾಗಿ ಶ್ರಮ ವಹಿಸಿ ಕೆಲಸ ಮಾಡಿ, ಬೆವರು ಸುರಿಸಿ ಎಂದು ಸಲಹೆ ನೀಡಿದರು.

ಬಾಲಪುರಸ್ಕಾರ ಪಡೆದ ಮಕ್ಕಳನ್ನು ಶ್ಲಾಘಿಸಿದ ಮೋದಿಯವರು, ನಾನು ನಿಮ್ಮೆಲ್ಲರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net