

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ (ಆ.30) ಬೆಳಗ್ಗೆ ಕರ್ನಾಟಕಕ್ಕೆ ಆಗಮಿಸಿದ್ದು, ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕಕ್ಕೆ ಆಗಮಿಸುವ ಮುನ್ನ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಚೀನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿದ್ದಾರೆ.
ಚೀನಾ ಹೊಸ ನಕ್ಷೆ ಬಿಡುಗಡೆ ಮಾಡಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಈಗಷ್ಟೇ ಲಡಾಕ್ನಿಂದ ಬಂದಿದ್ದೇನೆ. ಲಡಾಖ್ನಲ್ಲಿ ಒಂದು ಇಂಚು ಭೂಮಿಯೂ ನಷ್ಟವಾಗಿಲ್ಲ ಎಂದು ಪ್ರಧಾನಿ ಹೇಳುತ್ತಿರುವುದು ಸುಳ್ಳು ಎಂದು ನಾನು ಪದೇ ಪದೇ ಹೇಳುತ್ತಲೇ ಬಂದಿದ್ದೇನೆ. ಮಂಗಳವಾರ ನಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಚೀನಾ ಸರ್ಕಾರ ಭಾರತಕ್ಕೆ ಸೇರಿದ ಭೂಮಿಯನ್ನು ತನ್ನದೆಂದು ಘೋಷಿಸಿದೆ.
ಚೀನಾ ನಮ್ಮ ಭೂಮಿ ಕಬಳಿಸಿದೆ
"ಲಡಾಕ್ನಲ್ಲಿ ಒಂದು ಇಂಚು ಭೂಮಿಯೂ ಹೋಗಿಲ್ಲ ಎಂದು ಪ್ರಧಾನಿ ಹೇಳಿದ್ದು ಸುಳ್ಳು ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಚೀನಾ ನಮ್ಮ ಭೂಮಿಯನ್ನು ಕಬಳಿಸಿದೆ ಎಂದು ಇಡೀ ಲಡಾಖ್ಗೆ ತಿಳಿದಿದೆ. ಈ ನಕ್ಷೆಯ ವಿಷಯ ತುಂಬಾ ಗಂಭೀರವಾಗಿದೆ. ಭೂಮಿಯನ್ನು ಕಿತ್ತುಕೊಂಡಿದ್ದಾರೆ, ಅದರ ಬಗ್ಗೆ ಪ್ರಧಾನಿ ಏನಾದರೂ ಹೇಳಬೇಕು''.
ಗೃಹ ಲಕ್ಷ್ಮೀ ಯೋಜನೆ
"ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಮಹಿಳೆಯರಿಗಾಗಿ ಅತಿದೊಡ್ಡ ಕಲ್ಯಾಣ ಯೋಜನೆ ಗೃಹ ಲಕ್ಷ್ಮಿ ಯೋಜನೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಲಿದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬರುವ ಮೊದಲು 5 ಗ್ಯಾರಂಟಿಗಳಲ್ಲಿ ಕರ್ನಾಟಕದ ಜನರೊಂದಿಗೆ ಈ ಯೋಜನೆಯ ಬಗ್ಗೆಯೂ ಪ್ರಸ್ತಾಪ ಮಾಡಿತ್ತು. ಈ ಗ್ಯಾರಂಟಿ ಅಡಿಯಲ್ಲಿ, ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ. ನೀಡಲಾಗುತ್ತದೆ.