PM ಮೋದಿ ಅಧ್ಯಕ್ಷ ಟ್ರಂಪ್‌ಗೆ ಮೊಣಕಾಲೂರಬಾರದು: ಭಾರತಕ್ಕೆ ಸಲಹೆ ನೀಡಿದ ಅಮೆರಿಕ ಮಾಜಿ ಅಧಿಕಾರಿ!

Untitled design - 2025-08-09T092029.674
Published on

PM: ಭಾರತ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಉಲ್ಲೇಖಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಆಮದಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ ನಂತರ, ಅಮೆರಿಕ ಸೇರಿದಂತೆ ವಿವಿಧ ಕಡೆಯಿಂದ ಟ್ರಂಪ್​ ಟೀಕೆಗೆ ಗುರಿಯಾಗಿದ್ದಾರೆ.

ಸುಂಕಗಳಿಂದಾಗಿ ಅಮೆರಿಕ-ಭಾರತ ಸಂಬಂಧವು ಈಗ ಅಪಾಯದಲ್ಲಿದೆ ಎಂದು ಅಮೆರಿಕದ ಮಾಜಿ ವಿದೇಶಾಂಗ ಉಪ ಕಾರ್ಯದರ್ಶಿ ಕರ್ಟ್ ಕ್ಯಾಂಪ್ಬೆಲ್ ಹೇಳಿದರು.

ಸಿಎನ್‌ಬಿಸಿ ಇಂಟರ್‌ನ್ಯಾಷನಲ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರ ಭಾರತದ ಮೇಲಿನ ಸುಂಕಗಳನ್ನು ಟೀಕಿಸಿದ ಅವರು,"21 ನೇ ಶತಮಾನದಲ್ಲಿ ಅಮೆರಿಕದ ಪ್ರಮುಖ ಸಂಬಂಧ ಭಾರತದೊಂದಿಗೆ ಇದೆ. ತಂತ್ರಜ್ಞಾನ, ಶಿಕ್ಷಣ ಮತ್ತು ಮಿಲಿಟರಿ ಸಹಕಾರದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವು ಅತ್ಯಂತ ಮುಖ್ಯವಾದ ಸಂಬಂಧವಾಗಿದೆ. ಅದರೆ, ಅದರಲ್ಲಿ ಹೆಚ್ಚಿನವು ಈಗ ಅಪಾಯದಲ್ಲಿದೆ'' ಎಂದಿದ್ದಾರೆ.

"ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ರೀತಿ ಭಾರತ ಸರ್ಕಾರವನ್ನು ಕಠಿಣ ಸ್ಥಿತಿಯಲ್ಲಿ ಇರಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಮೊಣಕಾಲೂರಬಾರದು" ಎಂದು ಅವರು ಭಾರತಕ್ಕೆ ಸಲಹೆ ನೀಡಿದರು.

ಭಾರತ ರಷ್ಯಾದೊಂದಿಗಿನ ಸಂಬಂಧ ತ್ಯಾಗ ಮಾಡಲ್ಲ

ರಷ್ಯಾದೊಂದಿಗಿನ ಸಂಬಂಧದ ಬಗ್ಗೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುವುದು ಪ್ರತಿಕೂಲ ಪರಿಣಾಮ ಬೀರಬಹುದು.ರಷ್ಯಾದೊಂದಿಗಿನ ಸಂಬಂಧವನ್ನು ತ್ಯಾಗ ಮಾಡಬೇಕೆಂದು ನೀವು ಭಾರತಕ್ಕೆ ಹೇಳಿದರೆ, ಭಾರತೀಯ ತಂತ್ರಜ್ಞರು ಇದಕ್ಕೆ ವಿರುದ್ಧವಾಗಿ ಮಾಡುತ್ತಾರೆ ಎಂದು ಕ್ಯಾಂಪ್ಬೆಲ್ ಹೇಳಿದರು.

ಭಾರತೀಯ ಆಮದುಗಳ ಮೇಲಿನ ಸುಂಕವನ್ನು ದ್ವಿಗುಣಗೊಳಿಸಲು ತಮ್ಮ ಆಡಳಿತ ನಿರ್ಧರಿಸಿದ ನಂತರ, ಸುಂಕದ ಕುರಿತಾದ ವಿವಾದ ಬಗೆಹರಿಯುವವರೆಗೆ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆ ಇರುವುದಿಲ್ಲ ಎಂದು ಟ್ರಂಪ್ ಶುಕ್ರವಾರ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net