ಬಿಹಾರದಲ್ಲಿ ಕೇಂದ್ರ ಸರ್ಕಾರದಿಂದ ಅಭಿವೃದ್ದಿ ಪರ್ವ: ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ | PM Modi

1
Published on

PM Modi : ಈ ಹಿಂದೆ ಅಧಿಕಾರದಲ್ಲಿದ್ದ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಬಿಹಾರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ಬಿಹಾರಕ್ಕೆ ಆರ್ಥಿಕತೆಯ ವಿಷಯದಲ್ಲಿ ದ್ರೋಹ ಎಸಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ಹಾಗೂ ಆರ್​ಜೆಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಹಾರದ ಪೂರ್ವ ಚಂಪಾರಣ್‌ಗೆ ಭೇಟಿ ನೀಡಿದ ಪ್ರಧಾನಿ, ಕೇಂದ್ರ ಸರ್ಕಾರದ ನಾಲ್ಕು ಅಮೃತ ಭಾರತ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ, ಸುಮಾರು 7,200 ಕೋಟಿ ರೂ, ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.ತಮ್ಮ ಸರ್ಕಾರದ ಮೂಲಸೌಕರ್ಯ ಉತ್ತೇಜನದ ಕುರಿತು ಉಲ್ಲೇಖಿಸಿ ಮತ್ತು ಪ್ರಸ್ತುತ ಎನ್‌ಡಿಎ ಸರ್ಕಾರ ಮತ್ತು ಹಿಂದಿನ ಆರ್‌ಜೆಡಿ ಆಡಳಿತದ ನಡುವಿನ ವ್ಯತ್ಯಾಸವನ್ನು ವಿವರಿಸಿದರು.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಆರ್​ಜೆಡಿ ಮೈತ್ರಿ ಸರ್ಕಾರ ಹತ್ತು ವರ್ಷದ ಆಡಳಿತಾವಧಿಯಲ್ಲಿ ಬಿಹಾರಕ್ಕೆ ಕೇವಲ 2ಲಕ್ಷ ಕೋಟಿ ರೂ. ಅನುದಾನ ನೀಡಿತ್ತು. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ನೇತೃತ್ವದ ಸರ್ಕಾರ ಇರುವುದರಿಂದ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಅನುಕೂಲವಾಗಿದೆ ಎಂದರು.2014ರಿಂದ ನನಗೆ ನೀವು ಮತ ನೀಡಿ ಆಶಿರ್ವಾದ ಮಾಡುತ್ತಿದ್ದು, ಅದರ ಫಲವಾಗಿ ಮೊದಲಿದ್ದ ಸೇಡಿನ ರಾಜಕೀಯವನ್ನು ಕೊನೆಗಾಣಿಸಿ ಹಿಂದಿನ ಸರ್ಕಾರಕ್ಕಿಂತ ಹತ್ತು ಪಟ್ಟು ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ದಿ ಪರ್ವವನ್ನೆ ಹರಿಸಿದ್ದೇವೆ ಎಂದರು.

ಅಲ್ಲದೆ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ ಯಶಸ್ಸನ್ನು ಮೋದಿ ಶ್ಲಾಘಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net