ಉಪವಾಸದ ಪ್ರಯೋಜನಗಳ ಕುರಿತು ಪ್ರಧಾನಿ ಮೋದಿ ಮಾತು; ‘ನಮೋ’ ಉಪವಾಸ ದಿನಚರಿ ಬಹಿರಂಗ | PM Modi

Untitled design (18)
Published on

ನವದೆಹಲಿ: ಪ್ರಧಾನಿ ಮೋದಿ ಅವರು ಕೆಲಸದ ಕಡೆಗೆ ನೀಡುವ ಸಮರ್ಪಣೆ ನೋಡಿದರೆ, ಅವರ ವಯಸ್ಸನ್ನು ಊಹಿಸುವುದು ತುಂಬಾ ಕಷ್ಟ. ಈ ವಯಸ್ಸಿನಲ್ಲೂ ಅವರು ಯುವಕರಿಗೆ ಸ್ಫೂರ್ತಿಯಾಗುತ್ತಿದ್ದಾರೆ. ಪ್ರಧಾನಿ ಮೋದಿ(PM Modi) ದಿನವಿಡೀ ತುಂಬಾ ಕಾರ್ಯನಿರತ ವೇಳಾಪಟ್ಟಿಯನ್ನು ಹೊಂದಿದ್ದಾರೆ, ಆದರೂ ಅವರು ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ ಅವರು ಈ ವಯಸ್ಸಿನಲ್ಲಿಯೂ ಸಹ ಇಷ್ಟು ಫಿಟ್ ಆಗಿ ಉಳಿದಿದ್ದಾರೆ.

ಪ್ರಧಾನಿ ಮೋದಿಯವರ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ ಅವರು ಎಂದಿಗೂ ಜಂಕ್ ಫುಡ್ ತಿನ್ನುವುದಿಲ್ಲ. ಅವರು ಯಾವಾಗಲೂ ತನ್ನ ಆಹಾರ ಪದ್ಧತಿಯ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಅಲ್ಲದೆ ಅವರ ಫಿಟ್​ನೆಸ್​​ ವಿಚಾರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಅವರು ಅನುಸರಿಸುತ್ತಿರುವ ಅವರ ಶಿಸ್ತಿನ ಉಪವಾಸ ದಿನಚರಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ವತಃ ಮೋದಿ ಅವರೇ ತಮ್ಮ ಉಪವಾಸ ವೇಳಾಪಟ್ಟಿಯ ಬಗ್ಗೆ ಮತ್ತು ಅದು ಅವರ ಜೀವನಶೈಲಿಯನ್ನು ಹೇಗೆ ರೂಪಿಸಿದೆ ಎಂಬುದರ ಕುರಿತು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಜೂನ್ ಮಧ್ಯಭಾಗದಲ್ಲಿ ಪ್ರಾರಂಭವಾಗಿ ದೀಪಾವಳಿಯ ನಂತರ ಕೆಲ ತಿಂಗಳವರೆಗೆ ಆಚರಿಸುವ ನಾಲ್ಕು ತಿಂಗಳ ಕಾಲ ಉಪವಾಸ ಮಾಡುವ ಚಾತುರ್ಮಾಸದ ಪ್ರಾಚೀನ ಭಾರತೀಯ ಸಂಪ್ರದಾಯವನ್ನು ತಾವು ಅನುಸರಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದರು. ಈ ಸಮಯದಲ್ಲಿ ನಾನು 24 ಗಂಟೆಗಳ ಒಳಗೆ ಒಂದು ಊಟವನ್ನು ಮಾತ್ರ ಸೇವಿಸುತ್ತೇನೆ ಎಂದು ಹೇಳಿದರು. ಮಳೆಗಾಲದಲ್ಲಿ ಜೀರ್ಣಕ್ರಿಯೆ ಹೇಗೆ ನಿಧಾನವಾಗುತ್ತದೆ, ಈ ಅಭ್ಯಾಸವು ಪ್ರಯೋಜನಕಾರಿಯಾಗಿದೆ ಎಂದು ವಿವರಿಸಿದರು.

ಅದಷ್ಟೇ ಅಲ್ಲದೆ ನವರಾತ್ರಿ ಉಪವಾಸದ ದಿನಚರಿಯ ಬಗ್ಗೆಯೂ ಮೋದಿ ಮಾತನಾಡಿದರು, ಅಲ್ಲಿ ಅವರು ಸಂಪೂರ್ಣವಾಗಿ ಆಹಾರವನ್ನು ತ್ಯಜಿಸುತ್ತಾರೆ. ಒಂಬತ್ತು ದಿನಗಳವರೆಗೆ ಬಿಸಿನೀರನ್ನು ಮಾತ್ರ ಕುಡಿಯುತ್ತಾರೆ. ಬಿಸಿನೀರು ಕುಡಿಯುವುದು ಯಾವಾಗಲೂ ನನ್ನ ದಿನಚರಿಯ ಭಾಗವಾಗಿದೆ ಮತ್ತು ಕಾಲಾನಂತರದಲ್ಲಿ ನನ್ನ ಜೀವನಶೈಲಿ ಸ್ವಾಭಾವಿಕವಾಗಿ ಈ ಅಭ್ಯಾಸಕ್ಕೆ ಹೊಂದಿಕೊಂಡಿದೆ ಎಂದು ಅವರು ಹೇಳಿದರು.

ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಅವರು, ಚಳಿಗಾಲವಿರಲಿ ಅಥವಾ ಬೇಸಿಗೆ ಇರಲಿ ಯಾವಾಗಲೂ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುವುದಾಗಿ ತಿಳಿಸಿದ್ದರು. ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು, ವರ್ಷವಿಡೀ ಉಗುರು ಬೆಚ್ಚಗಿನ ನೀರನ್ನು ಮಾತ್ರ ಕುಡಿಯುತ್ತೇನೆ ಎಂದು ಹೇಳಿದ್ದರು.

ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚೈತ್ರ ನವರಾತ್ರಿ ಉಪವಾಸವನ್ನು ಅನುಸರಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲಿ ಅವರು ದಿನಕ್ಕೆ ಒಮ್ಮೆ, ಒಂಬತ್ತು ದಿನಗಳವರೆಗೆ ಒಂದೇ ರೀತಿಯ ಹಣ್ಣನ್ನು ತಿನ್ನುತ್ತಾರೆ. ನಾನು ಪಪ್ಪಾಯಿಯನ್ನು ಆರಿಸಿದರೆ ಎಲ್ಲಾ ಒಂಬತ್ತು ದಿನಗಳವರೆಗೆ ಪಪ್ಪಾಯಿಯನ್ನು ಮಾತ್ರ ತಿನ್ನುತ್ತೇನೆ, ಬೇರೆ ಯಾವುದನ್ನೂ ಮುಟ್ಟುವುದಿಲ್ಲ ಎಂದು ಅವರು ವಿವರಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ಉಪವಾಸವು ತಮ್ಮ ಜೀವನದಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಉಪವಾಸದ ಪ್ರಯೋಜನಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ನೀವು ಉಪವಾಸ ಮಾಡುವಾಗ ವಾಸನೆ, ಸ್ಪರ್ಶ ಮತ್ತು ರುಚಿಯಂತಹ ನಿಮ್ಮ ಇಂದ್ರಿಯಗಳು ಹೆಚ್ಚು ಸೂಕ್ಷ್ಮವಾಗುತ್ತವೆ ಎಂಬುದನ್ನು ನೀವು ಗಮನಿಸಿರಬಹುದು ಎಂದು ಹೇಳಿದರು. ನನಗೆ ಉಪವಾಸವು ಸ್ವಯಂ ಶಿಸ್ತಿನ ಒಂದು ರೂಪ. ಅದು ಭಕ್ತಿಯ ಕ್ರಿಯೆ. ಅದು ನನ್ನನ್ನು ನಿಧಾನಗೊಳಿಸುವುದಿಲ್ಲ, ಅದು ನನ್ನನ್ನು ಚುರುಕುಗೊಳಿಸುತ್ತದೆ ಎಂದು ಹೇಳಿದರು.

ಉಪವಾಸವು ದೇಹವನ್ನು ದುರ್ಬಲಗೊಳಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಮನಸ್ಸು ಮತ್ತು ಚೈತನ್ಯ ಎರಡನ್ನೂ ಪುನರ್ಭರ್ತಿ ಮಾಡುವ ಒಂದು ಮಾರ್ಗವೆಂದು ನೋಡುವುದಾಗಿ ಹೇಳಿದರು. ಉಪವಾಸ ಎಂದರೆ ಊಟ ಬಿಡುವುದು ಮಾತ್ರವಲ್ಲ, ದೇಹವನ್ನು ಸಮತೋಲನಗೊಳಿಸುವುದು, ಇಚ್ಛಾಶಕ್ತಿಯನ್ನು ಬಲಪಡಿಸುವುದು ಮತ್ತು ಆಂತರಿಕ ಸಾಮರಸ್ಯವನ್ನು ಸಾಧಿಸುವುದು ಎಂದು ವಿವರಿಸಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net