

ನವದೆಹಲಿ: ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ದೇಶದಲ್ಲಿರುವ ಹಿಂದುಗಳು ಹಾಗೂ ಇತರೆ ಅಲ್ಪಸಂಖ್ಯಾತರಿಗೆ ಭದ್ರತೆ ನೀಡುವುದಾಗಿ ಬಾಂಗ್ಲಾದೇಶ ಸರ್ಕಾರದ ಹಂಗಾಮಿ ಮುಖ್ಯಸ್ಥ ಮುಹಮ್ಮದ್ ಯೂನಸ್ ಭರವಸೆ ನೀಡಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು. ಮುಹಮ್ಮದ್ ಯೂನಸ್ ಅವರು ಪ್ರಧಾನಿ ಮೋದಿ ಅವರಿಗೆ ದೂರಾವಣಿ ಕರೆ ಮಾತನಾಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ದೂರವಾಣಿ ಕರೆ ಮಾಡಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದುಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆ, ಭದ್ರತೆ ಮತ್ತು ರಕ್ಷಣೆಯನ್ನು ಭರವಸೆ ನೀಡಿದರು ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಮಂತ್ರಿ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲ ಇರುವುದಾಗಿ ಹೇಳಿದರು. ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಯೂನಸ್ ಅವರನ್ನು ಅಭಿನಂದಿಸಿ, ಬಾಂಗ್ಲಾದೇಶದ ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಕೇಳಿದರು ಎಂದು ಉಭಯ ನಾಯಕರ ನಡುವಿನ ದೂರವಾಣಿ ಸಂಭಾಷಣೆಗೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯದಿಂದ ಈ ಹೇಳಿಕೆ ನೀಡಲಾಗಿದೆ.
ಬಾಂಗ್ಲಾದೇಶದಲ್ಲಿರುವ ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರ ಭದ್ರತೆಯ ಬಗ್ಗೆ ಪ್ರಧಾನಿ ಮೋದಿ ಗುರುವಾರ(ಆಗಸ್ಟ್ 15) ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದರು. ನೆರೆಯ ರಾಷ್ಟ್ರವಾಗಿ, ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರ ಬಗ್ಗೆ ಕಾಳಜಿ ಅರ್ಥಮಾಡಿಕೊಳ್ಳಬಲ್ಲೆ. ಅಲ್ಲಿನ ಪರಿಸ್ಥಿತಿ ಶೀಘ್ರದಲ್ಲೇ ಸಾಮಾನ್ಯವಾಗಲಿದೆ ಎಂದು ಭಾವಿಸುತ್ತೇನೆ ಎಂದಿದ್ದರು.
ಶೇಖ್ ಹಸೀನಾ ಹಠಾತ್ ರಾಜೀನಾಮೆ ನೀಡಿ ಭಾರತಕ್ಕೆ ಬಂದ ನಂತರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಯೂನಸ್ ಪ್ರಮಾಣ ವಚನ ಸ್ವೀಕರಿಸಿದರು.(ಏಜೆನ್ಸೀಸ್)