

ನವದೆಹಲಿ: ಇಂದು 77ನೇ ಸ್ವಾತಂತ್ರ್ಯ ದಿನದ ಸಂಭ್ರಮ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವ ಮುನ್ನ ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಪುಷ್ಪ ನಮನ ಸಲ್ಲಿಸಿ, ಶಿರಬಾಗಿ ಗಾಂಧಿ ಸ್ಮಾರಕಕ್ಕೆ ನಮಿಸಿದ ಪ್ರಧಾನಿ ಮೋದಿ, ಸ್ಮಾರಕದ ಸುತ್ತ ಪ್ರದಕ್ಷಿಣೆ ಹಾಕಿದರು. ಬಳಿಕ ಅಲ್ಲಿಂದ ಕೆಂಪುಕೋಟೆಯತ್ತ ಪ್ರಧಾನಿ ಮೋದಿ ತೆರಳಿದರು.
ಇದಕ್ಕೂ ಮುನ್ನ ತಮ್ಮ ಎಕ್ಷ್ (ಟ್ವಿಟರ್) ಖಾತೆಯಿಂದ ಟ್ವೀಟ್ ಮಾಡಿರುವ ಪ್ರಧಾನಿ, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸೋಣ ಮತ್ತು ಅವರ ವಿಷನ್ ಅನ್ನು ನೆರವೇರಿಸುವ ಬದ್ಧತೆಯನ್ನು ನಾವು ಪುನರ್ದೃಢೀಕರಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ ಸತತ 10 ಸ್ವಾತಂತ್ರ್ಯೋತ್ಸವದ ಭಾಷಣವಾಗಿದೆ. ಮೋದಿ ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಭಾಷಣ ಆರಂಭಿಸಲಿದ್ದಾರೆ.
ಪ್ರಧಾನಿ ಮೋದಿಯವರ ಭಾಷಣವನ್ನು ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ ದೂರದರ್ಶನ ನೇರಪ್ರಸಾರ ಮಾಡಲಿದ್ದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಕೂಡ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಾಗೂ ಅದರ ಟ್ವಿಟರ್ ಹ್ಯಾಂಡಲ್ ನಲ್ಲಿ ಭಾಷಣವನ್ನು ನೇರ ಪ್ರಸಾರ ಮಾಡಲಿದೆ. ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕೃತ ಯೂಟ್ಯೂಬ್ ಚಾನೆಲ್ ಕೂಡ ಪ್ರಧಾನಿ ಭಾಷಣವನ್ನು ಪ್ರಸಾರ ಮಾಡಲಿದೆ. (ಏಜೆನ್ಸೀಸ್)