ಎನ್​ಡಿಎ ಸಂಸದೀಯ ಸಭೆಯಲ್ಲಿ ಸಂಸದರಿಗೆ ‘ನಮೋ’ ಕಿವಿಮಾತು; ಪ್ರಧಾನಿ ಹೇಳಿರುವ ಸಲಹೆ ಏನು ಗೊತ್ತಾ?

Untitled-design-2024-07-02T133542.175
Published on

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಂತರ ಸಂಸತ್ತಿನ ಮೊದಲ ಅಧಿವೇಶನ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕರಾಗಿ ರಾಹುಲ್​ ಗಾಂಧಿ ಅವರ ದೀರ್ಘಾವಧಿಯ ಭಾಷಣದ ಒಂದು ದಿನದ ಬಳಿಕ ಮಂಗಳವಾರ (ಜುಲೈ 2) ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರಿಗೆ ಸಂಸದೀಯ ನಿಯಮಗಳು ಮತ್ತು ನಡವಳಿಕೆಯನ್ನು ಅನುಸರಿಸುವಂತೆ ಸೂಚಿಸಿದ್ದಾರೆ.

ಬಿಜೆಪಿಯ ಉನ್ನತ ನಾಯಕರು ಮತ್ತು ಸಚಿವರು ಭಾಗವಹಿಸಿದ್ದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡುವಂತೆ ಸಂಸದರಿಗೆ ಸೂಚಿಸಿದರು. ಮೊದಲ ಬಾರಿಗೆ ಕಾಂಗ್ರೆಸ್ಸೇತರ ನಾಯಕರೊಬ್ಬರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿರುವುದರಿಂದ ಪ್ರತಿಪಕ್ಷಗಳು ತಮ್ಮ ಬಗ್ಗೆ ಅಸಮಾಧಾನಗೊಂಡಿವೆ ಎಂದು ಹೇಳಿದ್ದಾರೆ. ಅಲ್ಲದೆ ಸಂಸದರು ಸಂಸತ್ತಿನ ಸಮಸ್ಯೆಗಳನ್ನು ಅಧ್ಯಯನ ಮಾಡಬೇಕು, ನಿಯಮಿತವಾಗಿ ಸಂಸತ್ತಿಗೆ ಹಾಜರಾಗಬೇಕು ಮತ್ತು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ನಿಯಮಾನುಸಾರ ಉತ್ತಮವಾಗಿ ಪ್ರಸ್ತಾಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಭೆಯ ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಸಂಸದರಿಗೆ ಸೂಚಿಸಿದ್ದಾರೆ. ಪ್ರಧಾನಮಂತ್ರಿ ಅವರ ಸಂಗ್ರಹಾಲಯದಲ್ಲಿ, ಪಂಡಿತ್​​ ಜವಾಹರಲಾಲ್ ನೆಹರು ಅವರಿಂದ ಪ್ರಧಾನಿ ನರೇಂದ್ರ ಮೋದಿಯವರವರೆಗಿನ ಪ್ರಯಾಣವನ್ನು ಸುಂದರವಾಗಿ ಪ್ರದರ್ಶಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಅಜೆಂಡಾ ಇಲ್ಲ ಎಂದು ಹೇಳಿದರು.

ಸಂಸತ್ತಿನ ಎಲ್ಲಾ ಸದಸ್ಯರು ಯಾವುದೇ ಪಕ್ಷಕ್ಕೆ ಸೇರಿದರು ರಾಷ್ಟ್ರ ಸೇವೆ ನಮ್ಮ ಆದ್ಯ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಎನ್‌ಡಿಎ ಸಂಸದರು ದೇಶಕ್ಕೆ ಆದ್ಯತೆ ನೀಡುವ ಮೂಲಕ ಕೆಲಸ ಮಾಡಬೇಕು ಎಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net