

ಮಂಡ್ಯ: ಸಾವಿರಾರು ಕೋಟಿ ರೂ. ವೆಚ್ಚಗಳಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಮಾ.12) ಲೋಕಾರ್ಪಣೆಗೊಳಿಸಿದರು.
ಸುಮಾರು 1.8 ಕಿ.ಮೀ ರೋಡ್ ಶೋ ಮೂಲಕ ಹನಕೆರೆ ಹೆದ್ದಾರಿಯ ಸೇತುವೆಗೆ ತೆರಳಿ ದಶಪಥ ಹೆದ್ದಾರಿಯನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಪ್ರಧಾನಿಗೆ ರೆಡ್ ಕಾರ್ಪಟ್ ಹಾಕಿ ಸ್ವಾಗತಿಸಲಾಯಿತು. ಜಾನಪದ ಕಲಾತಂಡವು ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡವು. ಈ ವೇಳೆ ಜಾನಪದ ಕಲಾತಂಡದತ್ತ ಪ್ರಧಾನಿ ಮೋದಿ ಕೈ ಬೀಸಿದರು. ಕೆಲ ಹೊತ್ತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಒಂಟಿಯಾಗಿ ಹೆಜ್ಜೆ ಹಾಕಿದರು. ಸಿಎಂ ಬಸವರಾಜ ಬೊಮ್ಮಾಯಿಯನ್ನು ಬಿಟ್ಟು ಒಬ್ಬರೆ ಕೈ ಬೀಸುತ್ತಾ ಸಾಗಿದರು.
ಎಕ್ಸ್‌ಪ್ರೆಸ್ ವೇ ವಿಶೇಷತೆ ಏನು?
ಈ ಎಕ್ಸ್‌ಪ್ರೆಸ್ ವೇ ರಾಜ್ಯದಲ್ಲೇ ಮೊದಲು. 118 ಕಿ.ಮೀ. ಉದ್ದದ ರಸ್ತೆ ಇದಾಗಿದೆ. 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರಯಾಣ ಅವಧಿ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆಯಾಗಲಿದೆ. 4 ರೈಲ್ವೆ ಸೇತುವೆಗಳು, 49 ಅಂಡರ್ಪಾಸ್ ಮತ್ತು 13 ಮೇಲ್ಸುತುವೆ, 69 ಬಸ್ ಬೇ ಗಳು ಇವೆ.
ಲೋಕಾರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮದತ್ತ ಪ್ರಧಾನಿ ತೆರಳಿದರು. ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ ಮುಗಿಸಿ ಗಜ್ಜಲೆಗೆರೆ ಬಳಿ ನಿರ್ಮಾಣವಾಗಿರುವ ಹೆಲಿಪ್ಯಾಡ್ನಿಂದ ಧಾರವಾಡಕ್ಕೆ ಪ್ರಧಾನಿ ಮೋದಿ ತೆರಳಲಿದ್ದಾರೆ.