ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ !

modi
Published on

ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಕೇಂದ್ರ ಬಜೆಟ್​ ಬಳಿಕ ನಡೆದ ಬಿಜೆಪಿ ಸಿಎಂಗಳ ಮೊದಲ ಸಭೆ ಇದಾಗಿದೆ.

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಜೆಪಿ ನಡ್ಡಾ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ (ಉತ್ತರ ಪ್ರದೇಶ), ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ), ಭಜನ್‌ಲಾಲ್ ಶರ್ಮಾ (ರಾಜಸ್ಥಾನ) ಮತ್ತು ಮೋಹನ್ ಚರಣ್ ಮಝಿ (ಒಡಿಶಾ) ಪ್ರಮುಖರು ಉಪಸ್ಥಿತರಿದ್ದರು.

ಮಧ್ಯಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಗೋವಾ, ಹರಿಯಾಣ, ಮಣಿಪುರ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಸಹ ಚರ್ಚೆಯ ಭಾಗವಾಗಿದ್ದರು. "ಮುಖ್ಯಮಂತ್ರಿ ಪರಿಷತ್" ಸಭೆಯನ್ನು ಬಿಜೆಪಿ ಆಯೋಜನೆ ಮಾಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯ ಹಾಗೂ ಉತ್ತಮ ಆಡಳಿತ ಕಾರ್ಯಸೂಚಿಸುವ ಭಾಗವಾಗಿ ನಿಯಮಿತವಾಗಿ ಸಭೆಯನ್ನು ಆಯೋಜಿಸಲಾಗಿದೆ.

ಭಾನುವಾರ ಸಭೆ ಮುಂದುವರೆಯಲಿದ್ದು, ಸಾರ್ವತ್ರಿಕ ಚುನಾವಣೆ ಮತ್ತು ನಂತರ ನಡೆದ ಉಪ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಕುರಿತು ಪರಾಮರ್ಶೆ ನಡೆಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net