

PM Modi : ಸುಮಾರು ಏಳು ವರ್ಷಗಳ ಬಳಿಕ ಚೀನಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ (SCO) ದ ಶೃಂಗಸಭೆಗೂ ಮುನ್ನವೇ ಉಭಯ ದೇಶಗಳ ನಾಯಕರು ಮಹತ್ವದ ಮಾತುಕತೆ ನಡೆಸಿದರು. ಪ್ರಮುಖವಾಗಿ ಅಮೆರಿಕದ ಸುಂಕ ನಿಯಮಗಳ ಬಗ್ಗೆ ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಕಳೆದ 10 ತಿಂಗಳಲ್ಲಿ ಮೋದಿ-ಜಿನ್ಪಿಂಗ್ ಅವರ ಮೊದಲ ಭೇಟಿ ಇದಾಗಿದೆ ಮತ್ತು ಕಳೆದ ಏಳು ವರ್ಷಗಳಲ್ಲಿ ಮೋದಿ ಅವರ ಮೊದಲ ಚೀನಾ ಭೇಟಿಯೂ ಆಗಿದೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯ ನಂತರ ಇದೇ ಮೊದಲ ಬಾರಿಗೆ ಭಾರತ-ಚೀನಾ ಸಂಬಂಧಗಳಲ್ಲಿ ಮಹತ್ವದ ಸುಧಾರಣೆ ಕಂಡುಬಂದಿದೆ. ರಷ್ಯಾ ಬಳಿ ತೈಲ ಖರೀದಿ ಮಾಡುತ್ತಿರುವುದಕ್ಕೆ ದಂಡನೆಯಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಭಾರಿ ಸುಂಕಗಳಿಂದಾಗಿ ಅಮೆರಿಕದೊಂದಿಗಿನ ಸಂಬಂಧಗಳು ಹದಗೆಟ್ಟಿರುವುದರಿಂದ ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಜಿನ್ಪಿಂಗ್ ನಡುವಿನ ಭೇಟಿಯ ಪ್ರಮುಖ ಗಮನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಅಮೆರಿಕದ ವ್ಯಾಪಾರ ತಿಕ್ಕಾಟದ ನಡುವೆಯೂ ಏಕತೆಯ ಸಂದೇಶವನ್ನು ಸಾರುವುದಾಗಿದೆ. ಟ್ರಂಪ್ ಅವರ ವ್ಯಾಪಾರ ಮತ್ತು ಸುಂಕ ನೀತಿಗಳು ಚೀನಾ ಮತ್ತು ಭಾರತವನ್ನು ಹತ್ತಿರಕ್ಕೆ ತಂದಿವೆ ಎಂದು ಈಗಾಗಲೇ ಅನೇಕ ವಿದೇಶಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಅಮೆರಿಕಕ್ಕೆ ಮುಳುವಾಗಬಹುದು ಅಂತಾನೂ ಎಚ್ಚಿಸಿದ್ದಾರೆ.
ಅಂದಗಾಗೆ, ಶಾಂಘೈ ಸಹಕಾರ ಒಕ್ಕೂಟ (SCO) ದ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಭಾಗವಹಿಸಲಿದ್ದಾರೆ. ಹೀಗಾಗಿ ಒಂದೇ ವೇದಿಕೆಯಲ್ಲಿ ಮೂವರು ಜಾಗತಿಕ ನಾಯಕರು ಒಟ್ಟಿಗೆ ಸೇರಲಿದ್ದು, ಅಮೆರಿಕಕ್ಕೆ ಕಠಿಣ ಸಂದೇಶ ರವಾನೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)