

GST: ಕೇಂದ್ರ ಸರ್ಕಾರ ಸೆಪ್ಟೆಂಬರ್ 22 ರಂದು ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್ಟಿ) ಗಮನಾರ್ಹ ಕಡಿತವನ್ನು ಘೋಷಿಸಿದ ಕೆಲವೇ ದಿನಗಳ ಬಳಿಕ ಮತ್ತೊಂದು ಸಿಹಿ ಸುದ್ದಿಯ ಸುಳಿವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮುಂಬರುವ ದಿನಗಳಲ್ಲಿ ಮತ್ತಷ್ಟು ತೆರಿಗೆ ಕಡಿತದ ಬಗ್ಗೆ ಮಾತನಾಡಿದ್ದಾರೆ.
ಗುರುವಾರ(ಸೆ 25) ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಜಿಎಸ್ಟಿಯಲ್ಲಿನ ಕಡಿತ ಮತ್ತು ಅದರಿಂದ ಉಂಟಾಗುವ ಉಳಿತಾಯದ ಬಗ್ಗೆ ಸುದೀರ್ಘವಾಗಿ ಮಾಹಿತಿ ಹಂಚಿಕೊಂಡರು. ಇಂದು ದೇಶವು ಜಿಎಸ್ಟಿ ಉಳಿತಾಯ ಹಬ್ಬದ ಸಂಭ್ರಮ ಆಚರಿಸುತ್ತಿದ್ದು, ಇದು ಕೇವಲ ಇಲ್ಲಿಗೆ ಸೀಮಿತವಾಗಿಲ್ಲ ಎಂದರು. 2017 ರಲ್ಲಿ ನಾವು ಜಿಎಸ್ಟಿಯನ್ನು ಪರಿಚಯಿಸಿದ್ದೇವೆ ಮತ್ತು ಆರ್ಥಿಕ ಬಲವರ್ಧನೆಯತ್ತ ಕೆಲಸ ಮಾಡಿದ್ದೇವೆ, 2025 ರಲ್ಲಿ ಅದನ್ನು ಮತ್ತೆ ಪರಿಚಯಿಸುತ್ತೇವೆ ಮತ್ತು ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತೇವೆ. ಆರ್ಥಿಕತೆ ಬಲಗೊಂಡಂತೆ, ತೆರಿಗೆ ಹೊರೆ ಕಡಿಮೆಯಾಗುತ್ತದೆ. ದೇಶದ ಜನರ ಆಶೀರ್ವಾದದಿಂದ ಜಿಎಸ್ಟಿ ಸುಧಾರಣೆಯ ಪ್ರಕ್ರಿಯೆಯು ಹೀಗೆ ಮುಂದುವರಿಯುತ್ತದೆ ಎಂದರು.
2014 ರ ಮೊದಲು ಒಂದು ರೀತಿಯಲ್ಲಿ ತೆರಿಗೆಗಳ ಜಾಲವಿತ್ತು. ಇದರಿಂದಾಗಿ ವ್ಯವಹಾರದ ವೆಚ್ಚ ಮತ್ತು ಕುಟುಂಬದ ಬಜೆಟ್ನ್ನು ಸಮತೋಲನಗೊಳಿಸುವುದು ಅಸಾಧ್ಯವಾಗಿತ್ತು, 1000 ರೂ. ಮೌಲ್ಯದ ಶರ್ಟ್ಗೆ 117 ರೂ. ತೆರಿಗೆ ವಿಧಿಸಲಾಗುತ್ತಿತ್ತು. 2017 ರಲ್ಲಿ ಜಿಎಸ್ಟಿ ಪರಿಚಯಿಸಿದಾಗ, ಜಿಎಸ್ಟಿಯನ್ನು 170 ರೂ.ಗಳಿಂದ 50 ರೂ.ಗಳಿಗೆ ಇಳಿಸಲಾಯಿತು, ಈಗ ಸೆಪ್ಟೆಂಬರ್ 22 ರ ನಂತರ, ಅದೇ ಶರ್ಟ್ಗೆ ಕೇವಲ 35 ರೂ.ಗಳನ್ನು ಪಾವತಿಸಬೇಕಾಗುತ್ತದೆ. 2014 ರಲ್ಲಿ ಜನರು ಟೂತ್ಪೇಸ್ಟ್, ಎಣ್ಣೆ, ಶಾಂಪೂ ಸೇರಿದಂತೆ ಇತ್ಯಾದಿ ದಿನಬಳಕೆಯ ವಸ್ತುಗಳಿಗಾಗಿ 100 ರೂ.ಗಳನ್ನು ಖರ್ಚು ಮಾಡಿದರೆ 31 ರೂ.ಗಳನ್ನು ತೆರಿಗೆ ರೂಪದಲ್ಲಿ ವಿಧಿಸಲಾಗುತ್ತಿತ್ತು. 2017 ರಲ್ಲಿ, ತೆರಿಗೆಯನ್ನು 18 ರೂ.ಗಳಿಗೆ ಇಳಿಸಲಾಯಿತು. ಈಗ 131 ರೂ. ಮೌಲ್ಯದ ವಸ್ತುವು 105 ರೂ.ಗಳಿಗೆ ಲಭ್ಯವಿದೆ ಎಂದರು.
2014 ಕ್ಕೂ ಮುಂಚೆ ಒಂದು ಕುಟುಂಬ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿದರೆ, ಸುಮಾರು 25,000 ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು, ಆದರೆ, ಮುಂದಿನ ಪೀಳಿಗೆಯ ಜಿಎಸ್ಟಿ ಅನುಷ್ಠಾನದಿಂದ ಅಗತ್ಯ ವಸ್ತುಗಳು ಈಗ ಕೇವಲ ಐದು ಪ್ರತಿಶತ ಜಿಎಸ್ಟಿಯನ್ನು ಮಾತ್ರ ಒಳಗೊಂಡಿರುವುದರಿಂದ ಅವರು ಕೇವಲ 5,000-6,000 ರೂಪಾಯಿ ತೆರಿಗೆಯನ್ನು ಪಾವತಿಸಿದರೆ ಸಾಕು ಎಂದರು.
ಮೊದಲೆಲ್ಲಾ ಟ್ರ್ಯಾಕ್ಟರ್ ಖರೀದಿಸಲು 70,000 ರೂ.ಗಳಿಗಿಂತ ಹೆಚ್ಚು ತೆರಿಗೆ ಪಾವತಿಸಬೇಕಾಗಿತ್ತು, ಆದರೆ ಈಗ ಅದೇ ಟ್ರ್ಯಾಕ್ಟರ್ಗೆ ಕೇವಲ 30,000 ರೂ. ತೆರಿಗೆ ಪಾವತಿಸಬೇಕಾಗಿದೆ. ಇದರಿಂದ ರೈತರಿಗೆ 40,000 ರೂ ಉಳಿತಾಯವಾಗುತ್ತಿದೆ. ತ್ರಿಚಕ್ರ ವಾಹನಗಳ ಮೇಲಿನ ತೆರಿಗೆ 55,000 ರೂ.ಗಳಷ್ಟಿತ್ತು, ಈಗ ಅದರ ಮೇಲಿನ ಜಿಎಸ್ಟಿ ಸುಮಾರು 35,000 ರೂ.ಗಳಿಗೆ ಇಳಿದಿದೆ. ಇದು ನೇರವಾಗಿ 20,000 ರೂ.ಗಳ ಉಳಿಸುತ್ತದೆ. ದಶಕದ ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಸ್ಕೂಟರ್ಗಳು 8,000 ರೂ.ಗಳಷ್ಟು ಮತ್ತು ಮೋಟಾರ್ಸೈಕಲ್ಗಳು 9,000 ರೂ.ಗಳಷ್ಟು ಅಗ್ಗವಾಗಿವೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ದೊಡ್ಡ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕೆಲವು ರಾಜಕೀಯ ಪಕ್ಷಗಳು ದೇಶದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದು, 2014 ಕ್ಕಿಂತ ಮೊದಲಿನ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿವೆ. ತಮ್ಮ ಅವಧಿಯಲ್ಲಿ ತೆರಿಗೆ ಲೂಟಿ ಮಾಡಲಾಗುತ್ತಿತ್ತು. ಸಾಮಾನ್ಯ ನಾಗರಿಕರು ತೆರಿಗೆಯ ಹೊರೆಯಿಂದ ಬಳಲುತ್ತಿದ್ದರು. ನಮ್ಮ ಸರ್ಕಾರ ತೆರಿಗೆ ಮತ್ತು ಹಣದುಬ್ಬರವನ್ನು ಕಡಿಮೆ ಮಾಡಿದೆ. ನಾವು ದೇಶದ ಜನರ ಆದಾಯ ಮತ್ತು ಉಳಿತಾಯವನ್ನು ಹೆಚ್ಚಿಸಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಆದಾಯ ತೆರಿಗೆಯನ್ನು 2 ಲಕ್ಷ ರೂ.ವರೆಗೆ ವಿನಾಯಿತಿ ನೀಡಲಾಗಿತ್ತು, ಇಂದು 12 ಲಕ್ಷ ರೂ.ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಆದಾಯ ತೆರಿಗೆ ಮತ್ತು ಜಿಎಸ್ಟಿಯಲ್ಲಿ ವಿನಾಯಿತಿಗಳಿಂದಾಗಿ ಜನರು 2.5 ಲಕ್ಷ ಕೋಟಿ ರೂ.ಗಳನ್ನು ಉಳಿಸಿದ್ದಾರೆ ಎಂದು ತಿಳಿಸಿದರು.(ಏಜೆನ್ಸೀಸ್)