ಪ್ರಧಾನಿ ಮೋದಿಯವರಿಗೆ ಟ್ವಿಟರ್​ನಲ್ಲಿ 6 ಕೋಟಿ ಫಾಲೋವರ್ಸ್​..!; ಜಾಗತಿಕವಾಗಿ 3ನೇ ಸ್ಥಾನಕ್ಕೇರಿದ ನಾಯಕ

Prime Minister
Published on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್​ ಫಾಲೋವರ್ಸ್​ ಸಂಖ್ಯೆ ಇಂದು 60 ಮಿಲಿಯನ್ ಅಂದರೆ 6 ಕೋಟಿ ತಲುಪಿದೆ.

ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಟ್ವಿಟರ್​ ಫಾಲೋವರ್ಸ್​ ಸಂಖ್ಯೆ 6 ಕೋಟಿ ಮೀರಿದೆ. ಈ ಮೂಲಕ ಭಾರತದಲ್ಲಿ ಅತ್ಯಂತ ಹೆಚ್ಚು ಟ್ವಿಟರ್​ ಫಾಲೋವರ್ಸ್​ ಹೊಂದಿದ ನಾಯಕರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು 2009ರಲ್ಲಿ, ಅಂದರೆ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಟ್ವಿಟರ್​ ಖಾತೆ ಪ್ರಾರಂಭಿಸಿದ್ದಾರೆ. ನಂತರ 2014ರಲ್ಲಿ ಅವರು ಪ್ರಧಾನಿ ಹುದ್ದೆಗೇರಿದಾಗ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ಟ್ವಿಟರ್​​ನಲ್ಲಂತೂ ಸದಾ ಸಕ್ರಿಯರಾಗಿರುತ್ತಾರೆ. ಜನಸಾಮಾನ್ಯರೊಂದಿಗೆ ಕನೆಕ್ಟ್ ಆಗುತ್ತಾರೆ.

ಟ್ವಿಟರ್​​ನಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ.

ಅಮರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಅವರು 120 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದು ಮೊದಲ ಸ್ಥಾನದಲ್ಲಿ ಇದ್ದಾರೆ. ಹಾಗೇ 83 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಯುಎಸ್​ನ ಈಗಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಪ್ರಧಾನಿ ಮೋದಿಯವರು 60 ಮಿಲಿಯನ್​ (6 ಕೋಟಿ) ಅನುಯಾಯಿಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನಕ್ಕೇರಿದ್ದಾರೆ.

ಇನ್ನು ಗೃಹ ಸಚಿವ ಅಮಿತ್​ ಷಾ ಅವರು 2013ರ ಮೇ ತಿಂಗಳಲ್ಲಿ ಟ್ವಿಟರ್​ ಅಕೌಂಟ್ ಖಾತೆ ಪ್ರಾರಂಭಿಸಿದ್ದು 2 ಕೋಟಿ 16 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿಯವರೂ ಸದಾ ಟ್ವಿಟರ್​ನಲ್ಲಿ ಸಕ್ರಿಯರಾಗಿರುತ್ತಾರೆ. 2015ರ ಏಪ್ರಿಲ್​ನಿಂದ ಟ್ವಿಟರ್​ ಪ್ರಾರಂಭಿಸಿರುವ ರಾಹುಲ್​ ಗಾಂಧಿಯವರು 1 ಕೋಟಿ 52 ಲಕ್ಷ ಫಾಲೋವರ್ಸ್​​ನ್ನು ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net