

ನವದೆಹಲಿ: ಕೋವಿಡ್ ಸೋಂಕಿನ ಎರಡನೇ ಅಲೆ ಕೆಲವು ರಾಜ್ಯಗಳಲ್ಲಿ ಕಂಡು ಬಂದಿದೆ. ಈ ಆತಂಕದ ನಡುವೆ ಆಶಾಕಿರಣವೆಂಬಂತೆ ಶೀಘ್ರವೇ ಲಭ್ಯವಾಗಲಿರುವ ಕೋವಿಡ್ ಲಸಿಕೆಯ ವಿತರಣಾ ತಂತ್ರಗಾರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.
ಲಸಿಕೆ ಸಿಕ್ಕ ಕೂಡಲೇ ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿ ವಿತರಣೆಯನ್ನು ಪೂರೈಸುವುದು ಸವಾಲಿನ ಕೆಲಸವಾಗಿದ್ದು, ಇದನ್ನು ಜಾರಿಗೊಳಿಸುವುದಕ್ಕೆ ಸರಿಯಾದ ಯೋಜನೆ, ತಂತ್ರಗಾರಿಕೆ ರೂಪಿಸಬೇಕಾದ್ದು ಅವಶ್ಯ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯಗಳ ಸಹಕಾರ, ನೆರವಿನೊಂದಿಗೆ ಅದನ್ನು ರೂಪಿಸಲು ಮುಂದಾಗಿದೆ. ಭಾರತದಲ್ಲಿ ಐದು ಲಸಿಕೆಗಳ ಅಭಿವೃದ್ಧಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಪೈಕಿ ನಾಲ್ಕು ಲಸಿಕೆಗಳು ಎರಡು ಮತ್ತು ಮೂರನೇ ಹಂತದಲ್ಲಿದ್ದರೆ, ಇನ್ನೊಂದು ಒಂದು ಮತ್ತು ಎರಡನೇ ಹಂತದಲ್ಲಿದೆ.
ಈ ನಡುವೆ, ಕರೊನಾ ಸೋಂಕಿತರ ಸಂಖ್ಯೆ ರಾಷ್ಟ್ರೀಯ ಸರಾಸರಿ 50,000ದ ಕೆಳಕ್ಕೆ ಬಂದಿದ್ದು, ಕೊಂಚ ನಿರಾಳತೆ ಅನುಭವಿಸುವಂತೆ ಮಾಡಿದೆ. ಲಸಿಕೆಗಳ ಪ್ರಯೋಗ ಮುಂದುವರಿದಿರುವ ಕಾರಣ ಎಲ್ಲೆಡೆ ಆಶಾಭಾವನೆ ವ್ಯಕ್ತವಾಗಿದೆ. (ಏಜೆನ್ಸೀಸ್)