ದೇಶವನ್ನುದ್ದೇಶಿಸಿ ಮಾತನಾಡಿದ ಕೆಲವೇ ಹೊತ್ತಲ್ಲಿ ಟ್ವಿಟರ್​, ಫೇಸ್​​ಬುಕ್​ಗಳ ಪ್ರೊಫೈಲ್​ ಫೋಟೋ ಬದಲಿಸಿದ ಪ್ರಧಾನಿ ಮೋದಿ; ಒಂದು ಸಂದೇಶವಿದೆ ನೋಡಿ...

Narendra Modi Profile
Published on

ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಲಾಕ್​ಡೌನ್​ನ್ನು ಮೇ 3ರವರೆಗೆ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅದಾದ ಕೆಲವೇ ಹೊತ್ತಲ್ಲಿ ತಮ್ಮ ಟ್ವಿಟರ್ ಮತ್ತು ಫೇಸ್​ಬುಕ್​ ಪೇಜ್​ ಖಾತೆಯ ಪ್ರೊಫೈಲ್​ ಫೋಟೋವನ್ನು ಬದಲಿಸಿಕೊಂಡಿದ್ದಾರೆ.

ಮೂಗು, ಬಾಯಿ ಮುಚ್ಚುವಂತೆ ಬಟ್ಟೆ ಕಟ್ಟಿಕೊಂಡು, ಕೈ ಮುಗಿದು ನಿಂತಿರುವ ಫೋಟೋವನ್ನು ಟ್ವಿಟರ್​ ಹಾಗೂ ಫೇಸ್​ಬುಕ್​​​ಗಳ ಪ್ರೊಫೈಲ್ ಫೋಟೋವನ್ನಾಗಿ ಮಾಡಿಕೊಂಡಿದ್ದಾರೆ.

ಕರೊನಾ ವೈರಸ್​ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಮಾಸ್ಕ್ ಧರಿಸಿಯೇ ಇರಿ ಎಂದು ಪದೇಪದೆ ಹೇಳುತ್ತಿದ್ದಾರೆ. ಮನೆಯಿಂದ ಹೊರಹೋಗುವಾಗಷ್ಟೇ ಅಲ್ಲ, ಮನೆಯಲ್ಲಿ ಇದ್ದಾಗಲೂ ಮಾಸ್ಕ್​ ಹಾಕಿಕೊಂಡೇ ಇರಿ ಎಂದು ಈ ಹಿಂದೆ ಹೇಳಿದ್ದರು. ಲಾಕ್​ಡೌನ್​ ವಿಸ್ತರಣೆ ಸಂಬಂಧ ಇತ್ತೀಚೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದ ಮೋದಿಯವರು, ಹೋಮ್​ ಮೇಡ್​ ಮಾಸ್ಕ್ ಧರಿಸಿಕೊಂಡೇ ಅದರಲ್ಲಿ ಭಾಗವಹಿಸಿದ್ದರು.

ಇಂದು ಕೂಡ ತಮ್ಮ ಶಾಲನ್ನು ಮಾಸ್ಕ್​​ನಂತೆ ಕಟ್ಟಿಕೊಂಡೇ ಮಾತು ಪ್ರಾರಂಭ ಮಾಡಿದ ಪ್ರಧಾನಿ ಮೋದಿಯವರು, ಕೆಲವು ಕ್ಷಣಗಳ ಬಳಿಕ ಅದನ್ನು ತೆಗೆದು ಮಾತು ಮುಂದುವರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಹೊಸ ಪ್ರೊಫೈಲ್​ ಫೋಟೋಕ್ಕೆ ಫೇಸ್​ಬುಕ್​ನಲ್ಲಿ ಈಗಾಗಲೇ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. 17 ಸಾವಿರದಷ್ಟು ಶೇರ್​ ಆಗಿದೆ. ಈ ಮೂಲಕ ಕರೊನಾ ವೈರಸ್​ ವಿರುದ್ಧ ಹೋರಾಟದಲ್ಲಿ ಮಾಸ್ಕ್​ ಮಹತ್ವ ಎಷ್ಟು ಎಂಬುದನ್ನು ತೋರಿಸಿದ್ದಾರೆ.

ಲಾಕ್​ಡೌನ್​ ಮೇ 3ರವರೆಗೆ ವಿಸ್ತರಣೆಯಾಗಲಿದ್ದು, ಅದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಸರ್ಕಾರ ಮಾ.15ರಂದು ಬಿಡುಗಡೆ ಮಾಡಲಿದೆ ಎಂದು ಮೋದಿಯವರು ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net