ಚಂದ್ರಯಾನ 3 ಯಶಸ್ವಿ: ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

PM Modi Isro 1
Published on

ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪೀಣ್ಯಾದಲ್ಲಿರುವ ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಇಸ್ರೋ ಅಧ್ಯಕ್ಷ ಎಸ್​. ಸೋಮನಾಥನ್​ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಸೋಮನಾಥನ್​ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ ಬೆನ್ನು ತಟ್ಟಿ ಶಹಬ್ಬಾಸ್​ ಗಿರಿ ನೀಡಿದರು. ಬಳಿಕ ಚಂದ್ರಯಾನ 3 ಯೋಜನೆ ಹಿಂದಿರುವ ಎಲ್ಲ ವಿಜ್ಞಾನಿಗಳನ್ನು ಅಭಿನಂದಿಸಿ ಅವರೊಟ್ಟಿಗೆ ಗ್ರೂಪ್​ ಫೋಟೋ ತೆಗೆಸಿಕೊಂಡರು.

ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಗ್ರೀಸ್​ನ ರಾಜಧಾನಿ ಅಥೇನ್ಸ್​ನಿಂದ ಹೊರಟು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿಳಿದರು. ಮೋದಿ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ, ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಪೋಲಿಸ್ ಆಯುಕ್ತ ದಯಾನಂದ್ ಆತ್ಮೀಯವಾಗಿ ಬರಮಾಡಿಕೊಂಡರು.

ಎಚ್​ಎಎಲ್​ ಮುಂಭಾಗ ನಿರ್ಮಿಸಿದ್ದ ವೇದಿಕೆಯನ್ನೇರಿ ಜನರತ್ತ ಪ್ರಧಾನಿ ಮೋದಿ ಕೈಬೀಸಿದರು. ಅಲ್ಲದೆ, ಜನರನ್ನು ಉದ್ದೇಶಿಸಿ ಕೆಲಕಾಲ ಮಾತನಾಡಿದರು. ನಂತರ ಇಸ್ರೋ ಕಡೆ ಹೊರಟ ಪ್ರಧಾನಿ ಮೋದಿಗೆ ದಾರಿಯುದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರು ಜೈಕಾರ ಕೂಗಿದರು.

ಜಾಲಹಳ್ಳಿ ಜಂಕ್ಷನ್​ಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜೈಕಾರ ಕೂಗಿ, ಹೂಮಳೆ ಸುರಿದು ಪ್ರಧಾನಿಗೆ ಅದ್ಧೂರಿ ಸ್ವಾಗತ ಕೋರಿದರು. ಇಸ್ರೋ ಕಚೇರಿಗೆ ಆಗಮಿಸುತ್ತಿದ್ದಂತೆ ಕಚೇರಿ ಒಳಗೆ ತೆರಳುವ ಮುನ್ನ ಅಲ್ಲಿ ನೆರೆದಿದ್ದ ಜನರತ್ತ ಕೈಬೀಸಿ, ನಂತರ ಇಸ್ರೋ ಕಚೇರಿಯ ಒಳಗೆ ಪ್ರಧಾನಿ ಮೋದಿ ತೆರಳಿದರು.

ಚಂದ್ರಯಾನದ ಹಾದಿ

* ಜುಲೈ 14 – ಉಡಾವಣೆ

* ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ

* ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ

* ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ

* ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ

* ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್

*1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ

*2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ

*40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ

*3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net