ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ: ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ

PM Modi
Published on

ನವದೆಹಲಿ: ದೇಶದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿಭಜನೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಚ್ಚರಿಸಿದ ಪ್ರಧಾನಿ ಮೋದಿ, ಅಂತಹ ಪ್ರಯತ್ನಗಳು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ಹೇಳಿದರು. ಗುಜರಾತ್​ ಗಲಭೆ ಕುರಿತು ಬಿಬಿಸಿ ತಯಾರಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು.

ಶನಿವಾರ ದೆಹಲಿ ಕಂಟೋನ್ಮೆಂಟ್‌ನ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಭಾರತ ತನ್ನ ಭವ್ಯತೆ ಸಾಧಿಸಲು ಇರುವುದೊಂದೇ ಮಂತ್ರ ಅದು ಒಗ್ಗಟ್ಟಿನ ಮಂತ್ರ ಎಂದು ಹೇಳಿದರು.

ದೇಶದ ಯುವಕ ಕಾರಣದಿಂದ ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ತಮ್ಮ ಸರ್ಕಾರ ಡಿಜಿಟಲ್, ಸ್ಟಾರ್ಟ್‌ಅಪ್ ಮತ್ತು ಆವಿಷ್ಕಾರ ಕ್ರಾಂತಿಗಳನ್ನು ಮಾಡಿದ್ದು, ಇದು ಯುವಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಭಾರತದ ಯುವಜನತೆಗೆ ಹೊಸ ಅವಕಾಶಗಳ ಸಮಯವಾಗಿದೆ. ಎಲ್ಲೆಲ್ಲೂ ಭಾರತಕ್ಕೆ ಒಳ್ಳೆಯ ಸಮಯ ಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ಸಂದರ್ಭದಲ್ಲಿ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಹೆಸರೇಳದೆ ಟೀಕಿಸಿದ ಪ್ರಧಾನಿ ಮೋದಿ, ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು. ದೇಶ ಒಡೆಯಲು ಹಲವಾರು ನೆಪಗಳನ್ನು ಸೃಷ್ಟಿಸಲಾಗುತ್ತಿದೆ. ಭಾರತಮಾತೆಯ ಮಕ್ಕಳಲ್ಲಿ ಒಡಕು ಮೂಡಿಸಲು ಹಲವಾರು ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ. ಅಂತಹ ಪ್ರಯತ್ನಗಳ ಹೊರತಾಗಿಯೂ, ಭಾರತದ ಜನರಲ್ಲಿ ಎಂದಿಗೂ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ. ಏಕತೆಯ ಮಂತ್ರವು ಪ್ರತಿಜ್ಞೆ ಮತ್ತು ಭಾರತದ ಶಕ್ತಿಯಾಗಿದೆ. ಭಾರತವು ಭವ್ಯತೆಯನ್ನು ಸಾಧಿಸುವ ಏಕೈಕ ಮಾರ್ಗವಾಗಿದೆ ಎಂದು ಪ್ರಧಾನಿ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net