

ಜನರ ಅನುಕೂಲಕ್ಕೆಂದು ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತವೆ. ಅವನ್ನು ಸರಿಯಾಗಿ ಕಾರ್ಯಗತಗೊಳಿಸಬೇಕಾದ ಜವಾಬ್ದಾರಿ ಮತ್ತು ಕರ್ತವ್ಯ ಅಧಿಕಾರಿ-ಸಿಬ್ಬಂದಿಯದು. ಆದರೆ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವುದು ತಾವು ಮಾಡುತ್ತಿರುವ ಉಪಕಾರ, ಇದಕ್ಕಾಗಿ ಜನರು ತಮಗೆ ಕೃತಜ್ಞರಾಗಿರಬೇಕು ಎಂಬ ರೀತಿಯಲ್ಲಿ ನಮ್ಮ ಅಧಿಕಾರಶಾಹಿಯಲ್ಲಿ ಕೆಲವರ ಚಿತ್ತಸ್ಥಿತಿ ರೂಪುಗೊಂಡಿರುವುದು ವಿಷಾದಕರ ಬೆಳವಣಿಗೆ. ಈ ಕೃತಜ್ಞತೆ ಎಂದರೆ ಅದರ ಸ್ವರೂಪವೇನು ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ; ಅದು ಬಹಿರಂಗ ರಹಸ್ಯ. ಒಂದೊಮ್ಮೆ ‘ಕೃತಜ್ಞತೆ’ ಸಲ್ಲಿಸಲು ಜನರು ಒಪ್ಪಲಿಲ್ಲ ಎಂದಾದಲ್ಲಿ, ಅವರ ಕೆಲಸಕ್ಕೆ ಕತ್ತರಿ ಬಿತ್ತು ಎಂತಲೇ ಅರ್ಥ. ಕೆಲಸದ ವಿಳಂಬಕ್ಕೆ ಅಧಿಕಾರಿ-ಸಿಬ್ಬಂದಿ ನಾನಾ ಕಾರಣಗಳನ್ನು ಸದಾ ಸಿದ್ಧವಾಗಿಟ್ಟುಕೊಂಡಿರುತ್ತಾರೆ. ಹಳ್ಳಿ, ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗಳಿಗೆ ಡಿಜಿಟಲ್ ರೂಪ ಮತ್ತು ಆನ್ಲೈನ್ ಸೇವೆ ಒದಗಿಸಲು ರಾಜ್ಯ ಸರ್ಕಾರ ‘ಇ-ಸ್ವತ್ತು’ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಜನರಿಗೆ ಸರಿಯಾಗಿ ಸೇವೆ ಸಿಗುತ್ತಿಲ್ಲ. ಗ್ರಾಮ ಠಾಣಾ, ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಕಟ್ಟಡಗಳಿಗೆ ಇ-ಸ್ವತ್ತು ಅಗತ್ಯ.
ಉಳಿದಂತೆ, ನಗರ ವ್ಯಾಪ್ತಿಗೆ ಸೇರಿರುವಲ್ಲಿ, ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದಿಸಿ ಅಭಿವೃದ್ಧಿಪಡಿಸಿರುವ ಹೊಸ ಬಡಾವಣೆಗಳ ನಿವೇಶನಗಳಿಗೆ ಪಂಚತಂತ್ರ ತಂತ್ರಾಂಶದಲ್ಲಿ ಖಾತೆ ನೀಡಬೇಕು ಎಂಬುದು ಸರ್ಕಾರದ ಸೂಚನೆ. ಇದರ ಜವಾಬ್ದಾರಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ವಹಿಸಲಾಗಿದೆ. ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿ ಅಪ್ಲೋಡ್ ಮಾಡಿ ನಿಗದಿತ ಶುಲ್ಕ ಪಡೆಯಬೇಕು. ಹಾಗೇ, ಖಾತಾ ವಿತರಿಸಲು ಗರಿಷ್ಠ ದಿನಗಳ ಗಡುವು ಸಹ ಇದೆ. ಇವೆಲ್ಲ ಸರ್ಕಾರದ ನಿಯಮಗಳಲ್ಲಿ ಇವೆಯೇ ವಿನಾ ಜನರಿಗೆ ಸರಿಯಾಗಿ ಸೇವೆ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಅದರಲ್ಲೂ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಗಳೂರು ಮುಂತಾದ ತ್ವರಿತಗತಿ ಬೆಳವಣಿಗೆಯ ನಗರಗಳ ಸುತ್ತಮುತ್ತ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಕೊಡಲು ಹಣ ಕೇಳಲಾಗುತ್ತದೆ. ಹಣ ಕೊಟ್ಟರೆ ಸಮರ್ಪಕ ದಾಖಲೆ ಇಲ್ಲದಿದ್ದರೂ ಖಾತಾ ಮಾಡಿಕೊಡಲಾಗುತ್ತದೆ; ಹಣ ನೀಡದಿದ್ದರೆ ದಾಖಲೆ ಸರಿಯಿದ್ದರೂ ಏನಾದರೂ ಕುಂಟುನೆಪ ಹೇಳಿ ಸತಾಯಿಸಲಾಗುತ್ತದೆ; ನಿಯಮ ಪ್ರಕಾರ ನಿರ್ದಿಷ್ಟ ದಿನಗಳಲ್ಲಿ ಆಗಬೇಕಾದ ಕೆಲಸಕ್ಕೆ ವರ್ಷಗಟ್ಟಲೇ ತೊಂದರೆ ಕೊಡುತ್ತಾರೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕೆಲವೆಡೆ ಒಂದು ಖಾತೆಗೆ 15ರಿಂದ 20 ಸಾವಿರ ರೂ.ವರೆಗೂ ಲಂಚದ ರೇಟ್ ಫಿಕ್ಸ್ ಆಗಿದೆಯಂತೆ. ಸುಮ್ಮನೆ ಸಮಸ್ಯೆ ಏಕೆ ಎಂದು ಜನರೂ ಹಣ ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಪಾಠ ಬೆಳೆದಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು ತಮ್ಮ ಕರ್ತವ್ಯ ಮತ್ತು ಇದು ಜನಸೇವೆಯ ಒಂದು ಮಾರ್ಗವೂ ಹೌದು ಎಂಬ ಮನಸ್ಥಿತಿ ಅಧಿಕಾರಶಾಹಿಯಲ್ಲಿ ಬೆಳೆದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಹಾಗೇ, ಜನಪ್ರತಿನಿಧಿಗಳು ಕೂಡ ಈ ನಿಟ್ಟಿನಲ್ಲಿ ತಮ್ಮ ಹೊಣೆಗಾರಿಕೆಯನ್ನು ಮರೆಯಬಾರದು. ಸರ್ಕಾರಿ ವ್ಯವಸ್ಥೆಯ ಮೇಲೆ ಈಗಾಗಲೇ ಜನರ ನಂಬಿಕೆ ಕುಸಿದಿದ್ದು, ಇದು ಮತ್ತಷ್ಟು ಪಾತಾಳಕ್ಕೆ ಹೋಗದಂತೆ ನೋಡಿಕೊಳ್ಳುವ ವಿವೇಚನೆಯನ್ನು ಜನನಾಯಕರು ಮತ್ತು ಅಧಿಕಾರಶಾಹಿ ಪ್ರದರ್ಶಿಸಲಿ.