ನಮ್ ದೇಶಕ್ಕೆ ಕಳಿಸ್ಕೊಡಿ ಪ್ಲೀಸ್: ಬ್ರಿಟನ್​ನಲ್ಲಿ ಸಾವಿರಾರು ಭಾರತೀಯರ ಸಂಕಷ್ಟ ಬದುಕು ದುಸ್ತರ

rakesh mar 20 31
Published on

ಬೆಂಗಳೂರು: ವಿಶ್ವವಿದ್ಯಾಲಯ ಬಂದ್ ಆಗಿದೆ. ಅರೆಕಾಲಿಕ ಕೆಲಸವೂ ಹೋಗಿದೆ. ಜೀವನ ವೆಚ್ಚ ಮಿತಿಮೀರಿರುವುದರಿಂದ ಬದುಕುವುದು ಅತ್ಯಂತ ಕಷ್ಟವಾಗಿದೆ. ದಯವಿಟ್ಟು ನಮ್ಮ ದೇಶ (ಭಾರತ)ಕ್ಕೆ ಕರೆದುಕೊಂಡು ಹೋಗಿ ಬಿಟ್ಟುಬಿಡಿ....!

ಕರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಬ್ರಿಟನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಗೋಳಾಟ ಇದು. ಮ್ಯಾಂಚೆಸ್ಟರ್ ಭಾಗದಲ್ಲೇ 10 ಸಾವಿರ ಭಾರತೀಯರಿದ್ದಾರೆ. ಕರ್ನಾಟಕ, ತೆಲಂಗಾಣ, ಆಂಧ್ರ, ತಮಿಳುನಾಡಿನ ಜನರು ಇಲ್ಲಿ ಹೆಚ್ಚಿದ್ದಾರೆ. ವಿಶೇಷ ವಿಮಾನ ವ್ಯವಸ್ಥೆ ಮಾಡಿ ಭಾರತಕ್ಕೆ ಕಳುಹಿಸುವಂತೆ ಮನವಿ ಮಾಡುತ್ತಿದ್ದಾರೆ. ಮ್ಯಾಂಚೆಸ್ಟರ್​ನಲ್ಲಿ ‘ಇನ್ಸ್​ಪೈರಿಂಗ್ ಥಾಟ್ಸ್ ಬಿಜಿನೆಸ್ ಸಲ್ಯೂಷನ್ಸ್’ ಕಂಪನಿ ನಡೆಸುತ್ತಿರುವ ಬೆಂಗಳೂರಿನ ಉದ್ಯಮಿ ರಾಕೇಶ್ ಹೇಳುವಂತೆ ಬ್ರಿಟನ್​ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. 1600 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅದರಲ್ಲೂ ಸ್ವತಃ ಬ್ರಿಟನ್ ಪ್ರಧಾನಿಯೇ ತಮಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ವಿಡಿಯೋದಲ್ಲಿ ಹೇಳಿದ ಮೇಲಂತೂ ಆತಂಕ ಮತ್ತಷ್ಟು ಹೆಚ್ಚಾಗಿದೆ. 2019ರ ಸೆಪ್ಟೆಂಬರ್ ಹಾಗೂ 2020ರ ಜನವರಿ ತಿಂಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ಭಾರತದಿಂದ ಆಗಮಿಸಿರುವ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕುಟುಂಬದಿಂದ ದೂರದಲ್ಲಿರುವ ಅವರಿಗೆ ಅಸುರಕ್ಷತೆ ಕಾಡುತ್ತಿದೆ.

ಅಲ್ಲಿಂದ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ತಮ್ಮ ಸಹಾಯಕ್ಕೆ ಬರಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಬ್ರಿಟನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಆಪ್ತಸಮಾಲೋಚನೆ ನಡೆಸಲು ಹಾಗೂ ಸುರಕ್ಷತೆಯ ಬಗ್ಗೆ ಆತ್ಮಸ್ಥೈರ್ಯ ಮೂಡಿಸಲು ಭಾರತೀಯ ಮಹಿಳಾ ಸಂಘಟನೆಗಳಿಗೆ ಭಾರತೀಯ ರಾಯಭಾರ ಕಚೇರಿ ಅನುಮತಿ ನೀಡಿದೆ. ಮ್ಯಾಂಚೆಸ್ಟರ್​ನಲ್ಲಿ ಡಾ. ಶ್ರೀಭವಾನಿ ರಾಕೇಶ್ ಅವರನ್ನು ಸಂಪರ್ಕ ವ್ಯಕ್ತಿಯಾಗಿ ನೇಮಿಸಲಾಗಿದೆ. ಬೇರೆಕಡೆ ನೆಲೆಸಿರುವ ಬ್ರಿಟನ್ ನಾಗರಿಕರನ್ನು ವಿಶೇಷ ವಿಮಾನ ವ್ಯವಸ್ಥೆಯ ಮೂಲಕ ವಾಪಸ್ ಕರೆತರಲಾಗುತ್ತಿದೆ. ಅದೇ ರೀತಿ ತಮಗೂ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿ ಭಾರತಕ್ಕೆ ಕರೆದೊಯ್ಯುವಂತೆ ಮನವಿ ಮಾಡುತ್ತಿದ್ದಾರೆ. ಅರೆಕಾಲಿಕ ಉದ್ಯೋಗದಿಂದ ಬರುವ ಹಣದಿಂದ ಬಾಡಿಗೆ ಇನ್ನಿತರ ಖರ್ಚನ್ನು ಸರಿದೂಗಿಸುತ್ತಿದ್ದ ವಿದ್ಯಾರ್ಥಿಗಳಿಗೆ ಲಂಡನ್ನಿನಲ್ಲಿ ದುಬಾರಿ ಬಾಡಿಗೆ ನೀಡುವುದು ಕಷ್ಟವಾಗುತ್ತಿದೆ. ಇದೀಗ ಎಲ್ಲವೂ ಲಾಕ್​ಡೌನ್ ಆಗಿರುವುದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಅದರ ಜತೆಗೆ ಆಹಾರ ಪದಾರ್ಥ ಸರಬರಾಜಿನಲ್ಲಿ ವ್ಯತ್ಯಯ ಹಾಗೂ ದಿನಸಿ ಖರೀದಿಯಲ್ಲಿನ ನಿರ್ಬಂಧಗಳು ವಿದ್ಯಾರ್ಥಿಗಳಲ್ಲಿ ಭಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ರಾಕೇಶ್.

ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ

ತೆಲಂಗಾಣ ಮೂಲದ ಭರತ್ ಎಂಬ ವಿದ್ಯಾರ್ಥಿ ಪ್ರೆಸ್ಟನ್​ನಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದು, ತಾವು ಹಾಗೂ ತಮ್ಮ ಸ್ನೇಹಿತರು ಭಾರತವನ್ನು ತಲುಪಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಕೋರಿಕೊಂಡಿದ್ದಾರೆ. ಸ್ವತಃ ಬ್ರಿಟನ್ ಪ್ರಧಾನಿ, ರಾಜಕುಮಾರ ಚಾರ್ಲ್ಸ್ ಹಾಗೂ ಆರೋಗ್ಯ ಸಚಿವರೇ ಕರೊನಾ ಸೋಂಕಿಗೆ ಒಳಗಾಗಿರುವಾಗ ಇಲ್ಲಿನ ಆರೋಗ್ಯ ವ್ಯವಸ್ಥೆ ಮೇಲೆ ನಾವು ಹೇಗೆ ನಂಬಿಕೆ ಇಡುವುದು? ಎಂಬುದು ಈ ವಿದ್ಯಾರ್ಥಿಗಳ ಮುಖ್ಯ ಪ್ರಶ್ನೆ.

ಬ್ರಿಟನ್​ನಿಂದ ಚೀನಾ ವೈದ್ಯರಿಗೆ ಮೊರೆ

ಕರೊನಾ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗಾಗಿ ಬ್ರಿಟನ್ ಈಗ ಚೀನಾ ವೈದ್ಯರ ಮೊರೆ ಹೋಗಿದೆ. ಚೀನಾದಿಂದ ತಜ್ಞ ವೈದ್ಯರ ತಂಡಗಳನ್ನು ಕರೆಸಿಕೊಂಡಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ದಂಪತಿಗೇ ಸೋಂಕು ತಗುಲಿದೆ. ಇಲ್ಲಿನ ಸರ್ಕಾರ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ವೈದ್ಯರಿಗೂ ಸುರಕ್ಷತಾ ಸಲಕರಣೆಗಳನ್ನು ಒದಗಿಸಿಲ್ಲ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net