ನನ್ನ ಎಮ್ಮೆ ಈಯ್ದಿದೆ... ಅದರ ಬಾಣಂತನ ಮಾಡಲು ರಜೆ ಬೇಕು...!

buffalo
Published on

ರೇವಾ: ಕೋವಿಡ್​-19 ಪಿಡುಗು ದೇಶದೆಲ್ಲೆಡೆ ಹಬ್ಬಿದ ನಂತರದಲ್ಲಿ ಪೊಲೀಸ್​ ಅಧಿಕಾರಿಗಳು ಬಿಡುವಿಲ್ಲದಂತೆ ದಿನವಹಿ ಕೆಲಸ ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ತಮ್ಮ ತಾಯಿಗೆ ಹುಷಾರಿಲ್ಲವೆಂದೋ, ತಂದೆಯ ಆರೋಗ್ಯ ವಿಷಮಿಸಿರುವುದಾಗಿಯೋ ನೆಪಗಳನ್ನು ಒಡ್ಡಿ ರಜೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ, ಮಧ್ಯಪ್ರದೇಶದ ಪೊಲೀಸ್​ ಪೇದೆಯೊಬ್ಬರು ವಿಶಿಷ್ಠ ಕಾರಣಕ್ಕಾಗಿ ಆರು ದಿನಗಳ ರಜೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನನ್ನ ಎಮ್ಮೆ ಈಯ್ದಿದೆ. ಅದನ್ನು ಮತ್ತು ಅದರ ಮರಿಯನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲವಾಗಿದ್ದಾರೆ. ನನ್ನ ತಾಯಿಗೆ ಹುಷಾರಿಲ್ಲ. ಆದ್ದರಿಂದ, ನನಗೆ ಆರು ದಿನಗಳ ರಜೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲ, ನಾನು ಆ ಎಮ್ಮೆಯ ಹಾಲು ಕುಡಿದಿದ್ದರಿಂದಲೇ ಮಧ್ಯಪ್ರದೇಶ ಪೊಲೀಸ್​ ಪಡೆಯಲ್ಲಿ ಪೇದೆಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. ಈಗ ಅದಕ್ಕೆ ಕೃತಜ್ಞತೆ ಸಲ್ಲಿಸುವ ಸಮಯ ಒದಗಿಬಂದಿದೆ. ಅದರ ಬಾಣಂತನವನ್ನು ಮಾಡಬೇಕಾಗಿದೆ ಎಂದು ಮಧ್ಯಪ್ರದೇಶ ಪೊಲೀಸ್​ ಪಡೆಯ ವಿಶೇಷ ಸಶಸ್ತ್ರ ಪಡೆಯಲ್ಲಿ ಚಾಲಕರಾಗಿರುವ ಅವರು ರಜೆ ಚೀಟಿಯಲ್ಲಿ ಬರೆದಿದ್ದಾರೆ.

ನನಗೆ ಆರು ದಿನಗಳ ರಜೆ ಕೊಡಿ. ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಜತೆ ಎಮ್ಮೆಯ ಬಾಣಂತನವನ್ನೂ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ರಜೆ ಚೀಟಿ ಈಗ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net