

ನವದೆಹಲಿ: ಭಾರತ ಸೇನಾಪಡೆ ಬಲಿಷ್ಠವಾದ ಸೇನಾಪಡೆಯಾಗಿದೆ. ಬಲಿಷ್ಠ ಎಂದು ಹೇಳಿಕೊಳ್ಳುವ ಚೀನಾವನ್ನು ಸುಲಭವಾಗಿ ಮಣಿಸುವ ಸಾಮರ್ಥ್ಯ ಅದಕ್ಕಿದೆ. ದಯವಿಟ್ಟು ಯೋಧರ ಬಲಿದಾನವನ್ನು ರಾಜಕೀಯಕರಣಗೊಳಿಸಬೇಡಿ ಎಂದು ಲಡಾಖ್ನ ಪೂರ್ವ ಭಾಗದಲ್ಲಿ ಜೂ.15ರಂದು ಚೀನಾ ಯೋಧರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡಿರುವ ಯೋಧರೊಬ್ಬರ ತಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜೂ.15ರ ಘರ್ಷಣೆಯಲ್ಲಿ ತಾಯ್ನಾಡಿನ ರಕ್ಷಣೆಯ ವೇಳೆ ಯೋಧ ಸುರೇಂದ್ರ ಸಿಂಗ್ ಗಾಯಗೊಂಡಿದ್ದಾರೆ. ಇವರ ತಂದೆ ಬಲ್ವಂತ್ ಸಿಂಗ್ ಅವರು ಚೀನಾದೊಂದಿಗಿನ ಘರ್ಷಣೆಯ ಬಗ್ಗೆ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಈ ಘರ್ಷಣೆಯಲ್ಲಿ ತಾವು ಹೇಗೆ ಗಾಯಗೊಂಡರು ಎಂಬುದನ್ನು ಸುರೇಂದ್ರ ಸಿಂಗ್ ಅವರು ತಮ್ಮ ತಂದೆ ಬಲ್ವಂತ್ ಸಿಂಗ್ ಅವರಿಗೆ ವಿವರಿಸಿದ್ದಾರೆ ಎನ್ನಲಾದ ವಿಡಿಯೋ ತುಣುಕನ್ನು ಬಳಸಿಕೊಂಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಅವರನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಹಿರಿಯ ಸಚಿವರು ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದಾರೆ. ನಿಮ್ಮ ಸುಳ್ಳುಗಳ ಮೂಲಕ ದಯವಿಟ್ಟು ಹುತಾತ್ಮ ಯೋಧರನ್ನು ಅವಮಾನಿಸಬೇಡಿ #BJPBetraysOurJawans ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಶುಕ್ರವಾರ ಟ್ವೀಟ್ ಮಾಡಿದ್ದರು.
ನನ್ನ ಪುತ್ರನಿಂದ ದಿಢೀರ್ ಎಂದು ಫೋನ್ ಕರೆ ಬಂದಿತು. ಲೇಹ್ನಲ್ಲಿ ಎಲ್ಲೋ ತನ್ನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ. ತನಗೆ ಗಾಯವಾಗಿರುವುದಾಗಿ ತಿಳಿಸಿದ. ಆದರೆ, ಈಗ ತನ್ನ ಸ್ಥಿತಿ ತಟಸ್ಥವಾಗಿರುವುದಾಗಿ ಹೇಳಿದ. ನಾವು 200-300 ಜನರಿದ್ದೆವು. ಚೀನಿಯರು 2 ಸಾವಿರದಿಂದ 2,500 ಇದ್ದಿರಬಹುದು. ನಮ್ಮನ್ನು ಸುತ್ತುವರಿದು, ರಾಡ್ಗಳು, ಬಡಿಗೆಗಳಿಂದ ಹಲ್ಲೆ ಮಾಡಿದರು. ಕಲ್ಲುಗಳನ್ನು ತೂರಿದರು. ನಾವು ಬರಿಗೈಲಿ ಇದ್ದೆವು. ಘರ್ಷಣೆ ಏರ್ಪಟ್ಟಿತು. ದೇವರ ದಯದಿಂದ ನಾವು ಬಚಾವ್ ಆದೆವು. ನನ್ನ ತಲೆಗೆ 10ರಿಂದ 12 ಹೊಲಿಗೆಗಳನ್ನು ಹಾಕಲಾಗಿದೆ. ಕೈ ಮತ್ತು ಕಾಲಿಗೆ ಗಾಯಗಳಾಗಿವೆ ಎಂದು ಖಾಸಗಿ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಬಲ್ವಂತ್ ಸಿಂಗ್ ಹೇಳಿದ್ದರು. ಈ ವಿಡಿಯೋ ತುಣಕನ್ನು ಬಳಸಿಕೊಂಡು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಟ್ವಿಟ್ಟರ್ನಲ್ಲಿ ಹರಿಹಾಯ್ದಿದ್ದರು.
ಬಲ್ವಂತ್ ಸಿಂಗ್ ಅವರು ರಾಹುಲ್ ಗಾಂಧಿ ಅವರ ಈ ಟ್ವೀಟ್ಗೆ ಪ್ರತಿಕ್ರಿಯಿಸಿ, ಭಾರತೀಯ ಸೇನೆ ಬಲಿಷ್ಠವಾಗಿದ್ದು, ಚೀನಾವನ್ನು ಮಣಿಸಬಲ್ಲದ್ದಾಗಿದೆ ಎಂದು ಹೇಳಿಕೆ ನೀಡಿದ್ದರು. ಇದರ ವಿಡಿಯೋ ತುಣಕನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿ, ಧೀರ ಯೋಧರ ತಂದೆ ರಾಹುಲ್ ಗಾಂಧಿ ಅವರಿಗೆ ಒಂದು ಸ್ಪಷ್ಟ ಸಂದೇಶವನ್ನು ಇಲ್ಲಿ ಕೊಟ್ಟಿದ್ದಾರೆ. ಈ ವಿಷಯವಾಗಿ ಇಡೀ ದೇಶವೇ ಒಗ್ಗಟ್ಟಾಗಿರುವಾಗ, ರಾಹುಲ್ ಗಾಂಧಿ ಅವರು ತುಚ್ಛ ರಾಜಕೀಯದ ಕೀಳು ಮನೋಭಾವ ಬಿಟ್ಟು ಮೇಲೇಳಬೇಕು. ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಯಲು ದೇಶದೊಂದಿಗೆ ಕೈಜೋಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.