

ಬೆಂಗಳೂರು : ದೇವಾಲಯದಲ್ಲಿ ಸಿದ್ದಪಡಿಸುವ ಪ್ರಸಾದಕ್ಕೆ ಎಷ್ಟು ಪ್ರಮಾಣದ ಸಕ್ಕರೆ, ಎಷ್ಟು ಪ್ರಮಾಣದ ಅಕ್ಕಿ ಬಳಸಲಾಗುತ್ತಿದೆ ಎಂಬತಹ ಪ್ರಶ್ನೆಗಳನ್ನು ಕೇಳುವ ಮೂಲಕ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಹಿಂಸೆಗೆ ಕಾರಣವಾಗುವ ಮಾಹಿತಿ ಹಕ್ಕು ಕಾಯ್ದೆಯಿಂದ ದೇವಾಲಯಗಳನ್ನು ಹೊರಗಿಡಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಈ ಸಂಬಂಧ ಅಖಿಲ ಕರ್ನಾಟಕ ಹಿಂದೂ ದೇವಸ್ಥಾಾನಗಳ ಪುರೋಹಿತರು, ಆಗಮಿಕರು ಹಾಗೂ ಅರ್ಚಕರ ಸಂಘ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೇವಾಲಯಗಳು ಸಾರ್ವಜನಿಕ ಸಂಸ್ಥೆಗಳಲ್ಲ ಎಂದು ದೇಶದ ಹಲವು ಹೈಕೋರ್ಟ್‌ಗಳು ಹೇಳಿವೆ. ಆದರೆ ಕೆಲವರು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಇಲಾಖೆಯ ಆಯುಕ್ತರ ಕಚೇರಿಯ ಅಧಿಕಾರಿಗಳ ಮೂಲಕ ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಹೆಸರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ತಯಾರಿಸುವ ಪ್ರಸಾದದಲ್ಲಿ ಎಷ್ಟು ಸಕ್ಕರೆ, ಅಕ್ಕಿ, ಉಪ್ಪು-ಖಾರ ಬಳಸಲಾಗುತ್ತದೆ ?
ಪ್ರತಿದಿನ ಪೂಜೆ-ಅರ್ಚನೆಗಳಿಂದ ಎಷ್ಟು ಹಣ ಸಂಗ್ರಹವಾಗುತ್ತದೆ. ಅದೆನ್ನಲ್ಲ ಯಾವುದಕ್ಕೆ ಖರ್ಚು ಮಾಡಲಾಗುತ್ತದೆ ಎಂಬಂತಹ ಮಾಹಿತಿಗಳನ್ನು ಕೇಳಲಾಗುತ್ತದೆ. ಕೇಳಿದ ಮಾಹಿತಿ ಕೊಡದಿದ್ದರೆ ನಾನಾ ರೀತಿ ಕಿರುಕುಳ, ಬೆದರಿಕೆ ಹಾಕಲಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೇ ಈ ಮಾಹಿತಿ ಹಕ್ಕು ಕಾರ್ಯಕರ್ತರ ಜತೆ ಆಯುಕ್ತರ ಕಚೇರಿಯ ಸಿಬ್ಬಂದಿಯೂ ಶಾಮೀಲಾಗಿದ್ದಾರೆ. ಸೀಮಿತ ಕಾನೂನು ಜ್ಞಾನ ಹೊಂದಿರುವ ಅರ್ಚಕರಿಗೆ ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಆಗಮ ಶಾಸ್ತ್ರಗಳ ಪ್ರಕಾರ ದೇವಸ್ಥಾನಗಳಲ್ಲಿ ದೈನಂದಿನ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ದೇವಾಲಯಗಳಿಗೆ ಸರ್ಕಾರ ಒಂದು ಪೈಸೆ ಹಣ ಕೊಡುವುದಿಲ್ಲ. ಭಕ್ತಾದಿಗಳು ನೀಡಿದ ಕಾಣಿಕೆ, ದಾನಗಳ ಮೂಲಕ ನಿರ್ವಹಣೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಬರುವುದಿಲ್ಲ. ಸಾಮಾನ್ಯವಾಗಿ ಈ ರೀತಿಯಲ್ಲಿ ಆದೇಶಿಸುವುದಕ್ಕೂ ಅವಕಾಶವಿಲ್ಲ. ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರ, ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬುದು ನಮಗೆ ಗೊತ್ತಾಗುವುದಿಲ್ಲ. ಪ್ರತೀ ಪ್ರಕರಣವನ್ನು ಪರಿಶೀಲಿಸಲಾಗುವುದಿಲ್ಲ ಎಂದು ತಿಳಿಸಿ ವಿಚಾರಣೆ ಮುಂದೂಡಿತು ಜೂ.೧೧ ಕ್ಕೆ ಮುಂದೂಡಿದೆ.