

ಜಿ.ನಾಗರಾಜ್, ಬಂಗಾರಪೇಟೆ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಆಡಳಿತ ಮಂಡಳಿಗೆ ಜ.5ರಂದು ಚುನಾವಣೆ ನಿಗದಿಯಾಗಿದ್ದು, ಬ್ಯಾಂಕಿನ ಆಡಳಿತ ಮಂಡಳಿಯನ್ನು ಕಾಂಗ್ರೆಸ್ ಮತ್ತೇ ವಶ ಮಾಡಿಕೊಳ್ಳಲು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅದಕ್ಕಾಗಿ ಮುಖಂಡರು ಎಲ್ಲ ರೀತಿಯ ತಾಲೀಮು ನಡೆಸುತ್ತಿದ್ದರೆ, ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಚುನಾವಣೆ ಬಗ್ಗೆ ನಿರಾಸಕ್ತಿ ಹೊಂದಿರುವುದರಿಂದ ಕಾಂಗ್ರೆಸ್ನಲ್ಲಿ ನಿರ್ದೇಶಕರಾಗಲು ಆಕಾಂಗಳ ಪೈಪೋಟಿ ಭರದಿಂದ ಸಾಗಿದೆ.
ಕಳೆದ ಹಲವು ದಶಕಗಳಿಂದ ಭೂ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿಕೊಂಡು ಬರುತ್ತಿದೆ. ಈ ಹಿಂದಿನ ಚುನಾವಣೆಗಳಲ್ಲಿ ರೈತರ ಬ್ಯಾಂಕ್ಅನ್ನು ವಶಪಡಿಸಿಕೊಳ್ಳಲು ಮೂರು ಪಕ್ಷಗಳಲ್ಲಿ ಜಿದ್ದಾಜಿದ್ದಿ ರಾಜಕೀಯ ನಡೆಯುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮಾತ್ರ ಬ್ಯಾಂಕನ್ನು ಮತ್ತೆ ತಮ್ಮ ವಶಕ್ಕೆ ಪಡೆಯಲು ಆಸಕ್ತಿ ತೋರುತ್ತಿದೆ. ಆದರೆ ಮೈತ್ರಿ ಪಕ್ಷಗಳಲ್ಲಿ ಇದೂವರೆಗೂ ಯಾವುದೇ ಚಟುವಟಿಕೆಗಳು ಕಂಡು ಬರುತ್ತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇಲ್ಲದಿರುವಾಗ ಎರಡೂ ಪಕ್ಷಗಳು ಚುನಾವಣಾ ಅಖಾಡಕ್ಕೆ ಇಳಿಯುತ್ತಿತ್ತು. ಆದರೆ ಮೈತ್ರಿಯ ಬಳಿಕ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉತ್ಸಾಹ ತೋರುತ್ತಿಲ್ಲ. ಇದರಿಂದ ಈ ಬಾರಿ ಎರಡೂ ಪಕ್ಷಗಳ ಬೆಂಬಲಿತರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿಯಲು ಚಿಂತಿಸಿದ್ದಾರೆ ಎನ್ನಲಾಗುತ್ತಿದೆ.
ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಪ್ರಬಲವಾಗಿದ್ದು, ಜೆಡಿಎಸ್ನವರೇ ಸಂಸದರಿದ್ದರೂ ಸಹ ಈ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೇಟು ಹಾಕುತ್ತಿರುವುದು ಆಶ್ಚರ್ಯ ಮೂಡಿಸಿದ್ದು, ಮೈತ್ರಿ ಕಾರ್ಯಕರ್ತರಲ್ಲಿ ನಿರಾಸೆ ಮನೆ ಮಾಡಿದೆ. ಮತದಾರರ ಪಟ್ಟಿಯಲ್ಲಿ ಬಹುತೇಕ ಮೈತ್ರಿ ಪಕ್ಷಗಳ ಬೆಂಬಲಿತ ಶೇರುದಾರರ ಹೆಸರುಗಳು ನಾಪತ್ತೆಯಾಗಿರುವುದರಿಂದ ಮತ್ತು ನಿರ್ದೇಶಕರ ಸ್ಥಾನಗಳ ಮೀಸಲಾತಿಯಲ್ಲಿ ಅನುಕೂಲವಿಲ್ಲದ ಕಾರಣ ಈ ಚುನಾವಣೆಯಲ್ಲಿ ಮೈತ್ರಿಯಿಂದ ಕಣಕ್ಕಿಳಿಸಿದರೂ ಜಯ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆಯಿಂದ ಹಿಂದೆ ಸರಿಯುವಂತಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಎಲ್ಲ 16 ಕ್ಷೇತ್ರಗಳಲ್ಲಿಯೂ ಒಟ್ಟು 1,281 ಮತದಾರರಿದ್ದು, ಸಾಲಗಾರರಲ್ಲದ ಕ್ಷೇತ್ರಲ್ಲಿ 505 ಮತದಾರರಿರುವುದು ಗಮನ ಸೆಳೆಯುತ್ತಿದೆ. ಕೆಜಿಎಫ್ ಕ್ಷೇತ್ರದಲ್ಲಿ ಕೇವಲ 18 ಮತದಾರರಿದ್ದರೆ, ಸುಸ್ತಿದಾರರು 46 ಮಂದಿ, ಷೇರು ಸುಸ್ತಿದಾರರು 66, ಅನರ್ಹ ಮತದಾರರು 2,178 ಮಂದಿಯಿದ್ದರೆ ಮರಣ ಹೊಂದಿರುವವರ ಸಂಖ್ಯೆ 59 ಸೇರಿ ಒಟ್ಟು 3,630 ಮಂದಿ ಮತಪಟ್ಟಿಯಿಂದ ತೆಗೆದು ಹಾಕಿರುವ ಕಾರಣ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಿದೆ.
ಒಂದು ಸ್ಥಾನ ಸರ್ಕಾರಿ ನಾಮನಿರ್ದೇಶಿತ
ಭೂ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಒಟ್ಟು 17 ಸ್ಥಾನಗಳಿದ್ದು, 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಸ್ಥಾನ ಸರ್ಕಾರಿ ನಾಮ ನಿರ್ದೇಶಿತರಾದರೆ, ಬಂಗಾರಪೇಟೆ, ಚಿಕ್ಕಅಂಕಂಡಹಳ್ಳಿ, ಮಾಗೊಂದಿ, ತೊಪ್ಪನಹಳ್ಳಿ, ಬೇತಮಂಗಲ, ಸೂಲಿಕುಂಟೆ, ಸುಂದರಪಾಳ್ಯ, ಕೆಜಿಎಫ್, ಕ್ಯಾಸಂಬಳ್ಳಿ ಕ್ಷೇತ್ರಗಳು ಸಾಮಾನ್ಯ ಸ್ಥಾನಗಳಾಗಿದ್ದು, ಹುನ್ಕುಂದ ಹಿಂದುಳಿದ ವರ್ಗ ಎ, ಹುಲಿಬೆಲೆ ಹಿಂದುಳಿದ ವರ್ಗ ಬಿ, ಬೂದಿಕೋಟೆ ಮಹಿಳಾ ಮೀಸಲು, ಎನ್.ಜಿ.ಹುಲ್ಕೂರು ಮಹಿಳಾ ಮೀಸಲು, ಕಮ್ಮಸಂದ್ರ ಎಸ್ಸಿ, ಕಾಮಸಮುದ್ರ ಎಸ್ಟಿಗೆ ಮೀಸಲಾಗಿದ್ದರೆ ಒಂದು ಸಾಲಗಾರರಲ್ಲದ ೇತ್ರ ಸಾಮಾನ್ಯವಾಗಿದೆ.
ಕೋಟ್
ಭೂ ಬ್ಯಾಂಕಿನ ಚುನಾವಣೆಗೆ ಸಂಬಂಧಪಟ್ಟಂತೆ ಮಂಗಳವಾರ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆೆ ನಡೆಸಲಾಗುತ್ತಿದೆ. ಸ್ಪರ್ಧಿಸುವ ಆಕಾಂಗಳ ಪಟ್ಟಿ ಮಾಡಿ ಎಲ್ಲರೊಟ್ಟಿಗೆ ಚರ್ಚಿಸಿ, ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜತೆಗೆ ಚುನಾವಣೆ ಎದುರಿಸಲು ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತದೆ.
> ಮಲ್ಲೇಶ್ ಬಾಬು ಸಂಸದ