ಕೋರ್ಟ್ ಅಂಗಳಕ್ಕೆ ಪಿಎಲ್‌ಡಿ ಬ್ಯಾಂಕ್ ಫಲಿತಾಂಶ

IMG_20250209_104104
ಹೊಳೆನರಸೀಪುರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಬ್ಯಾಂಕಿನ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು.
Published on

ಹೊಳೆನರಸೀಪುರ: ಪಟ್ಟಣದಲ್ಲಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಗದ್ದುಗೆ ಗೆಲ್ಲಲು ರಾಜಕೀಯ ಎರಡೂ ಪಕ್ಷಗಳು ತಡರಾತ್ರಿವರೆಗೂ ಜಿದ್ದಾಜಿದ್ದಿ ನಡೆಸಿದ್ದು, ಚುನಾವಣೆ ನಡೆಯಿತಾದರೂ, ಫಲಿತಾಂಶ ನ್ಯಾಯಾಲಯದ ಅಂಗಳಕ್ಕೆ ಜಾರಿದೆ.

ಮುಂದಿನ 5 ವರ್ಷದ ಅವಧಿಗೆ ಹೊಸ ನಿರ್ದೇಶಕರುಗಳ ಆಯ್ಕೆಗಾಗಿ ಭಾನುವಾರ ಚುನಾವಣೆ ನಡೆಯಿತು. ಆದರೆ ನ್ಯಾಯಾಲಯದ ಆದೇಶದ ಬಳಿಕವೇ ಸೋಲು, ಗೆಲವು ಪ್ರಕಟವಾಗಬೇಕಿದೆ. 2 ದಿನಗಳ ಹಿಂದೆಯಷ್ಟೆ 226 ಮತದಾರರು ಮತಚಲಾವಣೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಶನಿವಾರ ರಾತ್ರಿ ಮತದಾರರ ಪಟ್ಟಿಗೆ ಹೆಚ್ಚುವರಿಯಾಗಿ 100 ಜನರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಬ್ಯಾಂಕ್ ಸಿಬ್ಬಂದಿ ತಡರಾತ್ರಿವರೆಗೂ ನಡೆಸಿದ್ದನ್ನು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಅದರಲ್ಲೂ ಪಡುವಲಹಿಪ್ಪೆ ಗ್ರಾಮದ ಷೇರುದಾರರೇ ಎಂಬುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ಬ್ಯಾಂಕ್ ಪ್ರಕಾರ ನ್ಯಾಯಾಲಯದ ಆದೇಶಾನುಸಾರ ಮತದಾರರ ಪಟ್ಟಿಗೆ ಸೇರ್ಪಡೆ ಅಗತ್ಯ ಇದ್ದು, ತುರ್ತು ಕೆಲಸ ನಡೆಸಿದ್ದೇವೆ ಎಂದಿದ್ದರು.

ಇದೀಗ ವಿವಾದದ ಹಿನ್ನೆಲೆಯಲ್ಲಿ ಸಂಸದ ಶ್ರೇಯಸ್ ಗೊಂದಲ ನಿವಾರಿಸುವಂತೆ ಮೇಲಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮತ ಚಲಾವಣೆಗೆಂದು 9 ಕ್ಷೇತ್ರಕ್ಕೆ ತಲಾ 9 ಬೂತ್‌ಗಳನ್ನು ಇರಿಸುವ ಜತೆಗೆ ಹೆಚ್ಚುವರಿಯಾಗಿ ಮತ್ತೊಂದು ಬೂತ್ ಇರಿಸಲಾಗಿದೆ. ವಿವಾದಿತ ಮತ್ತೊಂದು ಕ್ಷೇತ್ರದ ತೀರ್ಪನ್ನು ಪರಿಗಣಿಸುವ ವಿಚಾರ ನ್ಯಾಯಾಲಯದಲ್ಲೇ ಬಗೆಹರಿಯಬೇಕಿದೆ.

ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣಾಭಿವೃದ್ಧ್ದಿ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ತಾಲೂಕಿನ ಒಟ್ಟು 14 ಸ್ಥಾನಕ್ಕೆ ಆಯ್ಕೆ ನಡೆದಿದ್ದು, 5 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದೆ. ಉಳಿದ 9 ಸ್ಥಾನಕ್ಕೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. 3 ಹೋಬಳಿಗಳ ಸಾಲಗಾರ ಕ್ಷೇತ್ರಗಳಿಂದ 24 ಜನ ಷೇರುದಾರರು ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 18 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು.

ಯಾಕಿಷ್ಟು ಕಡಿಮೆ ಮತದಾರರು?

ಒಟ್ಟು 7900 ಷೇರುದಾರರು ಇದ್ದಾರೆ. ಇವರಲ್ಲಿ ಎ, ಬಿ ಮತ್ತು ಸಿ ಎಂದು ವಿಂಗಡಣೆ ಮಾಡಲಾಗಿದೆ. ಎ ಶ್ರೇಣಿಯಲ್ಲಿ ಬರುವ 226 ಜನ ಮಾತ್ರ ಷೇರುದಾರ ಸದಸ್ಯತ್ವನ್ನು ಪಡೆದವರಿದ್ದು, ಇವರಿಗೆ ಮಾತ್ರ ನಿಯಮಾವಳಿ ಪ್ರಕಾರ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಉಳಿದ ಷೇರುದಾರರು ಪ್ರತಿವರ್ಷ ನವೀಕರಿಸುವಲ್ಲಿ ವಿಫಲರಾಗಿರುವರು, ಬ್ಯಾಂಕ್‌ನಲ್ಲಿ ಸಾಲ ಪಡೆಯದಿದ್ದವರು ಮತ್ತು ಸಭೆಗೆ ಗೈರುಹಾಜರಾಗಿರುವರಿಗೆ ಹಲವು ನಿಯಮಗಳನ್ನು ವಿಧಿಸಿದ್ದರಿಂದ ಬಿ ಮತ್ತು ಸಿ ಗುಂಪಿಗೆ ಸೇರುವ ಷೇರುದಾರರು ಮತದಾನದ ಹಕ್ಕಿನಿಂದ ಹೊರಗುಳಿದವರಿದ್ದಾರೆ.

ದಶಕದಿಂದ ಜೆಡಿಎಸ್ ಪಾರುಪತ್ಯದಲ್ಲೇ ಇದ್ದ ಬ್ಯಾಂಕ್‌ನ ಆಡಳಿತ ಚುಕ್ಕಾಣಿ ಶತಾಯಗತಾಯ ಪಡೆಯಲೇಬೇಕೆಂದು ಕಾಂಗ್ರೆಸ್ ಈ ಬಾರಿ ಪ್ರಬಲ ಪೈಪೋಟಿ ಒಡ್ಡಿತ್ತು. ಎರಡೂ ಪಕ್ಷಗಳು ಷೇರುದಾರ ಮತದಾರರನ್ನು ಓಲೈಸಲು ಓಟಿಗೆ ನೋಟು ಎಂಬ ಆಟ ಬಟಾಬಯಲಾಗಿಯೇ ನಡೆದಿತ್ತು. ಆದರೆ ಮತ ಯಾರಿಗೆ ಹಿತವಾಗಲಿದೆ ಎನ್ನುವ ಕುತೂಹಲದ ಚುನಾವಣೆ ನಡೆಯಿತಾದರೂ, ಫಲಿತಾಂಶಕ್ಕೆ ಮಾತ್ರ ಕಾಯಲೇಬೇಕಿದೆ.

ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಹಿನ್ನೆಲೆ, ಹೆಚ್ಚುವರಿ 100 ಮತಗಳು ಪಟ್ಟಿಯಲ್ಲಿ ಸೇರ್ಪಡೆಗೆ ನ್ಯಾಯದ ಆದೇಶ ಪಾಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯ್ತು. ಪ್ರತ್ಯೇಕ ಬೂತ್‌ನಲ್ಲಿ ಹೆಚ್ಚುವರಿ ಮತದಾನ ಚಲಾವಣೆಗೊಂಡಿದೆ. ಇದನ್ನು ಪರಿಗಣಿಸುವ ವಿಚಾರ ನ್ಯಾಯಾಲದ ಆದೇಶಕ್ಕೆ ಕಾಯ್ದಿರಿಸಲಾಗಿದೆ. ಆದರೆ ಕಾಂಗ್ರೆಸ್ ಬೆಂಬಲಿತರು ಸದ್ಯ ಗೆಲುವುಕಂಡ ಕಾರಣ ಅಧೀಕೃತ ಪ್ರಕಟವಾಗಿಲ್ಲವಾದರೂ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net