ರಸ್ತೆಯಲ್ಲೇ ಸಸಿ ನಾಟಿ, ಮೀನುಗಾರಿಕೆ!

mdg protest
ಮೂಡಿಗೆರೆಯಲ್ಲಿ ವಿವಿಧ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿ ಸಚೇತನ ಯುವಕ ಸಂಘದ ಪದಾಧಿಕಾರಿಗಳು ರಸ್ತೆಲ್ಲೇ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ರವಿರಾಜ್ ಅರಸ್, ಬಿ.ಎಲ್.ಲೋಹಿತ್, ವಿಶುಕುಮಾರ್, ನಿಶ್ಚಲ್, ಫ್ರಾನ್ಸಿಸ್, ರಾಜೇಶ್, ರಮೇಶ್ ಇತರರಿದ್ದರು.
Published on

ಮೂಡಿಗೆರೆ: ಕೆಲವರು ಬಾಳೆ, ಕಾಫಿ, ಕೆಸುವಿನ ಗಿಡ ನೆಟ್ಟರು. ಭತ್ತದ ಸಸಿ ನಾಟಿ ಮಾಡಿದರು. ದೊಡ್ಡ ಗಾತ್ರದ ಗುಂಡಿಗಳಲ್ಲಿ ಮೀನುಗಳನ್ನು ಬಿಟ್ಟು ಅವುಗಳನ್ನು ಗಾಳದ ಮೂಲಕ ಹೊಡಿಸು ಸ್ಥಳದಲ್ಲೇ ವ್ಯಾಪಾರ ಮಾಡಿದರು.

ಇದು ಪಟ್ಟಣದ ಮೈಸೂರು ಬ್ಯಾಂಕ್ ರಸ್ತೆ ಇಷ್ಟೊಂದು ಪ್ರಮಾಣದಲ್ಲಿ ಹಾಳಾದರೂ ಸ್ಥಳೀಯ ಆಡಳಿ ದುರಸ್ತಿಗೆ ಮುಂದಾಗಿಲ್ಲ ಎಂದು ಸಚೇತನ ಯುವಕ ಸಂಘದ ಪದಾಧಿಕಾಗಳು ವಿನೂತನ ರೀತಿ ಪ್ರತಿಭಟನೆ ಮಾಡಿದ್ದು ಹೀಗೆ. ಪಟ್ಟಣದ ವಿವಿಧ ರಸ್ತೆಗಳು ಗುಂಡಿಮಯ. ವಾಹನಗಳು ಓಡಾಡುವಂತಿಲ್ಲ. ಮೊದಲ ಎರಡೂವರೆ ವರ್ಷ ಅವಧಿಯ ಆಡಳಿತ ಕೊನೆಗೊಂಡು 4 ತಿಂಗಳು ಕಳೆದರೂ ಪಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಿಲ್ಲ. ಈ ಕಾರಣಕ್ಕೆ ಆಡಳಿತ ಹಾದಿತಪ್ಪಿದೆ ಎಂದು ದೂರಿದರು.
ನಗರೋತ್ಥಾನ ಯೋಜನೆಯಡಿ ಕಳೆದ ವರ್ಷ ಪಪಂ ಖಾತೆಗೆ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಂದಿದೆ. ಇದನ್ನು ವಿವಿಧ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಕ್ರಿಯಾಯೋಜನೆ ತಯಾರಿಸಿದ್ದರು. ಅದು ನನೆಗುದಿಗೆ ಬಿದ್ದಿದೆ. ಪಟ್ಟಣದ ಮೈಸೂರು ಬ್ಯಾಂಕ್, ಕುವೆಂಪು ನಗರ, ಜೆ.ಎಂ, ವೇಣುಗೋಪಾಲಸ್ವಾಮಿ ದೇವಸ್ಥಾನ, ಕುರುಕಮಕ್ಕಿ, ಪಪಂ ಕಚೇರಿ, ಆದಿಶಕ್ತಿ ದೇವಸ್ಥಾನ ರಸ್ತೆ ಸೇರಿ ಮತ್ತಿತರ ಮಾರ್ಗಗಳಲ್ಲಿ ಭಾರಿ ಗಾತ್ರದ ಗುಂಡಿಗಳಾಗಿವೆ. ಈ ರಸ್ತೆಗಳನ್ನು 25 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆನಂತರ ದುರಸ್ತಿಯೂ ಆಗಿಲ್ಲ ಎಂದು ಸಚೇತನ ಯುವಕ ಸಂಘದ ಅಧ್ಯಕ್ಷ ರವಿರಾಜ್ ಅರಸ್ ಆರೋಪಿಸಿದರು.
ವಿವಿಧ ಬಡಾವಣೆಗಳಿಗೆ ತೆರಳುವವರು ಹದಗೆಟ್ಟ ರಸ್ತೆಯಲ್ಲೇ ಸಾಗಬೇಕು. ಪಟ್ಟಣದ ಬಡಾವಣೆಗಳಿಗೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬೇಕು. ಆದರೆ ವಾರದಲ್ಲಿ ಒಂದೆರಡು ದಿನ ಮಾತ್ರ ಪೂರೈಕೆ ಮಾಡಿ ವಿದ್ಯುತ್ ಸಮಸ್ಯೆ, ಪಂಪ್‌ಸೆಟ್ ಹಾಳಾಗಿದೆ ಎಂದೆಲ್ಲ ಸಬೂಬು ಹೇಳುತ್ತಿದ್ದಾರೆ ಎಂದರು ದೂರಿದರು.
ಸಂಘದ ಮಾಜಿ ಅಧ್ಯಕ್ಷ ಬಿ.ಎಲ್.ಲೋಹಿತ್ ಮಾತನಾಡಿ, ಪಪಂ ಆಡಳಿತ ನಿಷ್ಕ್ರಿಯಗೊಂಡಿದೆ. ಕರ್ತವ್ಯ ನಿಭಾಯಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರದ ಅನುದಾನ ಬಳಸಿ ಪಟ್ಟಣವನ್ನು ಅಭಿವೃದ್ಧಿಪಡಿಸದೆ ಕೈಚೆಲ್ಲಿ ಕುಳಿತಿದ್ದಾರೆ. ವಿವಿಧ ರಸ್ತೆಗಳಲ್ಲಿ ಭಾರಿ ಗಾತ್ರದ ಗುಂಡಿಗಳಾಗಿದ್ದರೂ ಅವುಗಳನ್ನು ಮುಚ್ಚುವ ಕೆಲಸವನ್ನೂ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.
ರಸ್ತೆ ಬದಿಯ ಗುಂಡಿಗಳ ಬಗ್ಗೆ ಪೋಲಿಸ್ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಹಲವು ಬಾರಿ ಚರ್ಚಿಸಿದ್ದರಿಂದ ಪೊಲೀಸರು ಕಳೆದ ವಾರ ಎಂ ಸ್ಯಾಂಡ್ ಹಾಗೂ ಕಲ್ಲುಗಳನ್ನು ತಂದು ಸುರಿದು ರಸ್ತೆ ಬದಿಯ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಗುಂಡಿ ಮುಚ್ಚಬೇಕಾದ ಪಪಂ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದರಿಂದ ಅವರ ಕೆಲಸವನ್ನು ಪೊಲೀಸರು ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಂಡಿಬಿದ್ದ ಎಲ್ಲ ರಸ್ತೆಗಳನ್ನೂ 15 ದಿನದಲ್ಲಿ ಅಭಿವೃದ್ಧಿಪಡಿಸಬೇಕು. ಅಧಿಕಾರಿಗಳು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದರೆ ಪಟ್ಟಣ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪಪಂ ಪ್ರಭಾರ ಮುಖ್ಯಾಧಿಕಾರಿ ಚಂದ್ರಕಾಂತ್ ಅವರಿಗೆ ಮನವಿ ಸಲ್ಲಿಸಿದರು.
ಸಚೇತನ ಯುವಕ ಸಂಘದ ಪದಾಧಿಕಾರಿಗಳಾದ ವಿಶುಕುಮಾರ್, ನಿಶ್ಚಲ್, ಫ್ರಾನ್ಸಿಸ್, ರಾಜೇಶ್, ರಮೇಶ್, ವಿನ್ಸೆಂಟ್, ರಾಬಿನ್, ಅನಿಲ್, ಮಂಜುನಾಥ ಪಟೇಲ್, ಬಸವರಾಜ್, ವೇಣು, ಟಿ.ಹರೀಶ್, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net