200 ಹಾಸ್ಟೆಲ್ ನಿರ್ಮಾಣಕ್ಕೆ ಚಿಂತನೆ: ಕೃಷ್ಣಮೂರ್ತಿ

meeting
ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಕೃಷ್ಣಮೂರ್ತಿ, ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪ, ಅಬ್ದುಲ್ ಜಬ್ಬಾರ್, ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಗುರುರಾಜ ಗಂಟಿಹೊಳಿ ಮುಂತಾದವರಿದ್ದರು.
Published on

ಶಿವಮೊಗ್ಗ: ರಾಜ್ಯದ ವಿವಿಧೆಡೆ ಆರ್ಥಿಕ ವರ್ಷದಲ್ಲಿ 200 ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿ ಹೊಸ ಹಾಸ್ಟೆಲ್‌ಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಕೃಷ್ಣಮೂರ್ತಿ ಅಧಿಕಾರಿಗಳಿಗೆ ತಿಳಿಸಿದರು.

ಹಿಂದುಳಿದ ವರ್ಗಗಳ ಇಲಾಖೆಯಿಂದ ಹಾಸ್ಟೆಲ್ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಜಾಗ ಗುರುತಿಸಬೇಕು. ಅರಣ್ಯ ಇಲಾಖೆ ಜಾಗವಾಗಿದ್ದರೆ ಯಾವ ಕಾರಣಕ್ಕೂ ಅನುಮತಿ ಸಿಗುವುದಿಲ್ಲ. ಹೀಗಾಗಿ ಸೂಕ್ತ ಸ್ಥಳ ಗುರುತಿಸಬೇಕು. ವಿದ್ಯಾರ್ಥಿ ನಿಲಯ ನಗರ ಇಲ್ಲವೇ ಪಟ್ಟಣ ಪ್ರದೇಶಗಳಿಂದ ದೂರವಿದ್ದರೆ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದರು.

ಬುಧವಾರ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಸಮಿತಿ ಗಮನಕ್ಕೆ ಬಂದಿದೆ. ಸಿಬ್ಬಂದಿ ನೇಮಕಾತಿ, ಹೊಸ ಹಾಸ್ಟೆಲ್ ನಿರ್ಮಾಣಕ್ಕೆ ಆರ್ಥಿಕ ಇಲಾಖೆಯ ಅನುಮತಿ ಸಿಗುತ್ತಿಲ್ಲ. ಇದು ಸರ್ಕಾರದ ಆಡಳಿತಾತ್ಮಕ ಅಂಶ. ಸದನದಲ್ಲಿ ಈ ಬಗ್ಗೆ ಗಮನಸೆಳೆಯಲಾಗುವುದು ಎಂದು ಹೇಳಿದರು.

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಒದಗಿಸಲು ಸರ್ಕಾರ ಎಲ್ಲ ರೀತಿಯ ಆರ್ಥಿಕ ನೆರವು ನೀಡುತ್ತಿದೆ. ಆದರೆ ಬಹುತೇಕ ಹಾಸ್ಟೆಲ್‌ಗಳಲ್ಲಿ ಉತ್ತಮವಾಗಿ ಅಡುಗೆ ತಯಾರಿಸುವವರೇ ಇರುವುದಿಲ್ಲ. ಹೀಗದಾಗ ಸರ್ಕಾರದ ಉದ್ದೇಶ ಈಡೇರದಂತಾಗುತ್ತದೆ. ಆದ್ದರಿಂದ ಅಡುಗೆ ಸಿಬ್ಬಂದಿ ನೇಮಕ ಸಂದರ್ಭ ಅವರ ಅಡುಗೆ ಕೌಶಲ ಗಮನಿಸಿ ಆಯ್ಕೆ ಮಾಡಬೇಕು ಎಂದು ಸೂಚಿಸಿದರು.

ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮಹತ್ವದ ಬದಲಾವಣೆಗಳು ಅವಶ್ಯ. ವಿದ್ಯಾರ್ಥಿ ನಿಲಯಗಳ ಆರಂಭಕ್ಕೂ ಹೆಚ್ಚಿನ ಬೇಡಿಕೆ ಇದೆ. ಇತ್ತೀಚೆಗೆ ಎಲ್ಲರಿಗೂ ಶಿಕ್ಷಣದ ಮಹತ್ವ ಅರಿವಾಗಿದೆ. ಶಾಲಾ ಕಾಲೇಜುಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವಿದ್ಯಾರ್ಥಿಗಳಿಗೆ ಸಮಾಲೋಚನಾ ಕಾರ್ಯಾಗಾರ ಏರ್ಪಡಿಸಬೇಕು. ಮಾದಕ ವಸ್ತುಗಳತ್ತ ವಿದ್ಯಾರ್ಥಿಗಳು ಆಕರ್ಷಿತರಾಗದಂತೆ ತಡೆಯಬೇಕಿದೆ ಎಂದರು.

ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನಗಳ ಪ್ರಗತಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಪೂರ್ಣವಾಗಿರುವ ಕೊಳವೆ ಬಾವಿಗಳು, ಹಿಂದುಳಿದ ವರ್ಗಗಳ ಜನರಿಗೆ ಸರ್ಕಾರದ ಸವಲತ್ತು ದೊರೆಯುತ್ತಿರುವ ಕುರಿತು ಸದನ ಸಮಿತಿಯು ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸದಸ್ಯರಾದ ಗುರುರಾಜ ಗಂಟಿಹೊಳಿ, ಅಬ್ದುಲ್ ಜಬ್ಬಾರ್, ಎ.ಕೆ.ಜಕ್ಕಪ್ಪನವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net