ಖಾಕಿ ಮೇಲೆಯೇ ಪಿಟ್ ಬುಲ್ ಅಟ್ಯಾಕ್: ನಾಯಿಗೆ ಏನೂ ಮಾಡಬೇಡಿ ಎಂದು ಅಂಗಲಾಚಿದ ವ್ಯಕ್ತಿ | Pit Bull Attacks

Pit Bull Attacks
ಮಹಿಳೆಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗೆ ಕಚ್ಚಿದ ಪಿಟ್ ಬುಲ್
Published on: 

Pit Bull Attacks: ಅಮೆರಿಕದ ಲಾಸ್ ಏಂಜಲೀಸ್‌ನ ಸ್ಕಿಡ್ ರೋ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಲು ಮುಂದಾದ ಪೊಲೀಸ್ ಅಧಿಕಾರಿಯ ಮೇಲೆ ಪಿಟ್ ಬುಲ್ ನಾಯಿಯೊಂದು ಏಕಾಏಕಿ ದಾಳಿ ನಡೆಸಿ ಕಚ್ಚಿದೆ. ಈ ಆಘಾತಕಾರಿ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಗರದ 6ನೇ ಮತ್ತು ವಾಲ್ ಸ್ಟ್ರೀಟ್ ಜಂಕ್ಷನ್ ಬಳಿ ಮಹಿಳೆಯನ್ನು ವಶಕ್ಕೆ ಪಡೆಯುವ ವೇಳೆ ನಡೆದ ಸಂಘರ್ಷದಲ್ಲಿ ಆಕೆಯ ಬಳಿಯಿದ್ದ ಪಿಟ್ ಬುಲ್ ನಾಯಿ ಪೊಲೀಸ್ ಅಧಿಕಾರಿಗೆ ಕಚ್ಚಿದೆ ಎಂದು ಎಲ್‌ಎಪಿಡಿ ತಿಳಿಸಿದೆ. ಗಾಯಗೊಂಡ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಆದರೆ ಬಂಧನಕ್ಕೆ ಕಾರಣವೇನೆಂದು ಪೊಲೀಸರು ಬಹಿರಂಗಪಡಿಸಿಲ್ಲ.

ಮಹಿಳೆಯ ಬಂಧನದ ವೇಳೆ ನಡೆದ ಕಿರಿಕ್​

ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಮಹಿಳೆಯನ್ನು ವಶಕ್ಕೆ ಪಡೆಯಲು ಮುಂದಾಗಿರುವುದು ಕಾಣಿಸುತ್ತದೆ. ಮಹಿಳೆ ನಾಯಿಯ ಚೈನ್ ಹಿಡಿದುಕೊಂಡು ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಇಬ್ಬರ ನಡುವೆ ಸಂಘರ್ಷ ನಡೆದಿದೆ. ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ನಾಯಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಈ ಗೊಂದಲದ ನಡುವೆ ಪಿಟ್ ಬುಲ್ ಏಕಾಏಕಿ ಪೊಲೀಸ್ ಅಧಿಕಾರಿಗೆ ಕಚ್ಚಿದೆ.

ನಾಯಿಯನ್ನು ರಕ್ಷಿಸಲು ಮುಂದಾದ ವ್ಯಕ್ತಿ

ಸಂಘರ್ಷದ ನಡುವೆ ಎಂಟ್ರಿ ಕೊಟ್ಟ ವ್ಯಕ್ತಿಯೊಬ್ಬ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದು, ನಾಯಿಗೆ ಏನೂ ಮಾಡದಂತೆ ಪೊಲೀಸರನ್ನು ಬೇಡಿಕೊಂಡಿದ್ದಾನೆ. ಇತ್ತ ಮಹಿಳೆ ನಾಯಿಯೊಂದಿಗೆ ಪರಾರಿಯಾಗಲು ಯತ್ನಿಸಿದಾಗ, ಬೆನ್ನಟ್ಟಿದ ಪೊಲೀಸ್ ಅಧಿಕಾರಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಅಷ್ಟರಲ್ಲೇ ಮಧ್ಯಪ್ರವೇಶಿಸಿದ್ದ ವ್ಯಕ್ತಿ ನಾಯಿಯ ಚೈನ್ ಹಿಡಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: ಸ್ಟ್ರೀಟ್ ಫುಡ್‌ ಪ್ರಿಯರೇ ಎಚ್ಚರ! ಬಾಯಲ್ಲಿ ನೀರೂರಿಸುವ ಪಾನಿಪುರಿಯಲ್ಲಿರುತ್ತೆ ಕೊಳೆತ ಆಲೂಗಡ್ಡೆ ? | Whitefield Pani Puri

ಮಹಿಳೆ ಬಂಧನ, ನಾಯಿ ಪ್ರಾಣಿ ಸೇವೆಗಳ ವಶಕ್ಕೆ

ಘಟನೆಯ ಬಳಿಕ ಮಹಿಳೆಯನ್ನು ಬಂಧಿಸಿರುವುದಾಗಿ ಎಲ್‌ಎಪಿಡಿ ತಿಳಿಸಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಪಿಟ್ ಬುಲ್ ನಾಯಿಯನ್ನು ಪತ್ತೆಹಚ್ಚಿ ಲಾಸ್ ಏಂಜಲೀಸ್ ಪ್ರಾಣಿ ಸೇವೆಗಳ ವಶಕ್ಕೆ ಒಪ್ಪಿಸಲಾಗಿದೆ. ನಾಯಿಯ ಆರೋಗ್ಯ ಸ್ಥಿತಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.