VIDEO| ಮನೆ ಕೆಲಸಕ್ಕಿದ್ದ ಅಪ್ರಾಪ್ತ ವಯಸ್ಕಳಿಗೆ ಚಿತ್ರ ಹಿಂಸೆ; ದಂಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

mob Thrash
Published on

ನವದೆಹಲಿ: ಅಪ್ರಾಪ್ತ ವಯಸ್ಕಳನ್ನು ಮನೆ ಕೆಲಸಕ್ಕೆಂದು ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಮಹಿಳಾ ಪೈಲಟ್​ ಹಾಗೂ ಆಕೆಯ ಪತಿಯನ್ನು ಗುಂಪೊಂದು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದೆಹಲಿಯ ದ್ವಾರಕಾ ನಗರದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಮಹಿಳಾ ಪೈಲಟ್ ಹಾಗೂ ಆಕೆಯ ಪತಿಯನ್ನು ಹಿಡಿದು ಥಳಿಸುತ್ತಿರುವುದು ಕಂಡು ಬರುತ್ತದೆ. ಆಕೆ ಕ್ಷಮೆ ಕೇಳಿದರು ಸಹ ಗುಂಪು ಹಲ್ಲೆ ಮಾಡುವುದನ್ನು ಮುಂದುವರೆಸುತ್ತದೆ.

ಘಟನೆಯ ಹಿನ್ನಲೆ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ದಂಪತಿಗಳಿಬ್ಬರು ಎರಡು ತಿಂಗಳ ಹಿಂದೆ ಅಪ್ರಾಪ್ತ ವಯಸ್ಕಳನ್ನು ಮನೆಕೆಲಸಕ್ಕೆಂದು ನೇಮಿಸಿದ್ದರು. ಇತ್ತೀಚಿಗೆ ಬಾಲಕಿಯ ಸಂಬಂಧಿಕರೊಬ್ಬರು ಭೇಟಿ ಮಾಡಿದಾಗ ಆಕೆಯ ಮೈಮೇಲೆ ಗಾಯದ ಗುರುತು ಹಾಗೂ ಸುಟ್ಟ ಕಲೆಗಳು ಪತ್ತೆಯಾಗಿದ್ದವು.

ಈ ಬಗ್ಗೆ ವಿಚಾರಿಸಿದಾಗ ಬಾಲಕಿ ಸರಿಯಾದ ಉತ್ತರವನ್ನು ನೀಡದೆ ಹೊರಟು ಹೋಗಿದ್ದಾಳೆ. ಇದರಿಂದ ಅನುಮಾನಗೊಂಡ ಬಾಲಕಿಯ ಸಂಬಂಧಿ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯರಿಗೆ ನಡೆದ ಘಟನೆ ಕುರಿತು ವಿವರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಪೈಲಟ್​ ದಂಪತಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪ್ರಕರಣ ಸಂಬಂಧ ಅಪ್ರಾಪ್ತ ವಯಸ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಂಪತಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net