

ಜೈಪುರ: (Accident ) ಪಿಕಪ್ ವ್ಯಾನ್ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ 7 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿ, ಎಂಟು ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.
ಪಿಕಪ್ ವಾಹನದ ಪ್ರಯಾಣಿಕರು ಖಾತು ಶ್ಯಾಮ್ ಮತ್ತು ಸಲಸರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಉತ್ತರ ಪ್ರದೇಶದ ಇಟಾದಲ್ಲಿರುವ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಮನೋಹರ್ಪುರ ಹೆದ್ದಾರಿಯಲ್ಲಿ ಬೆಳಿಗ್ಗೆ 4-5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಈ ವೇಳೆ ನಿಲ್ಲಿಸಿದ್ದ ಟ್ರಕ್ಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಏಳು ಮಕ್ಕಳು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ದೌಸಾ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ತಿಳಿಸಿದ್ದಾರೆ.
ಗಾಯಾಳುಗಳ ಚಿಕಿತ್ಸೆ ಮತ್ತೊಂದು ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಈ ಅಪಘಾತದಲ್ಲಿದ್ದ ಎಲ್ಲರು ಉತ್ತರ ಪ್ರದೇಶದ ನಿವಾಸಿಗಳು ಎಂದು ಹೇಳಲಾಗುತ್ತದೆ. ಅವರು ಖಾತು ಶ್ಯಾಮ್ ಜಿ ಮತ್ತು ಸಲಸರ್ ಬಾಲಾಜಿ ಅವರನ್ನು ಭೇಟಿ ಮಾಡಿ ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಎಂಟು ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ನಮಗೆ ಜೋರಾಗಿ ಬಡಿದ ಶಬ್ದ ಕೇಳಿಸಿತು. ನಂತರ ಇದ್ದಕ್ಕಿದ್ದಂತೆ ಬಹಳಷ್ಟು ಕೂಗು ಮತ್ತು ಕಿರುಚಾಟಗಳು ಕೇಳಿಬಂದವು. ಪಿಕಪ್ ಮತ್ತು ಟ್ರಕ್ ತೀವ್ರವಾಗಿ ಡಿಕ್ಕಿ ಹೊಡೆದಿರುವುದನ್ನು ನಾವು ನೋಡಿದ್ದೇವೆ. ಅಲ್ಲಿ ಜನರು ಕಿರುಚುತ್ತಿದ್ದರು. ಅವರು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದರು. ನಾವು ತಡಮಾಡದೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಂತರ ಪಿಕಪ್ ಟ್ರಕ್ನಲ್ಲಿ ಸಿಲುಕಿದ್ದ ಜನರನ್ನು ತೆಗೆದುಹಾಕಲು ನಾವು ಪೊಲೀಸರಿಗೆ ಸಹಾಯ ಮಾಡಿದ್ದೇವೆ. ಅದರ ನಂತರ, ಆಂಬ್ಯುಲೆನ್ಸ್ ಸಹಾಯದಿಂದ, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದಿದ್ದಾರೆ.