

ಮೈಸೂರು: ಪ್ರಾಚೀನ ಚಿಕಿತ್ಸಾ ವಿಧಾನಗಳು, ವಿನೂತನ ಸಂಶೋಧನೆ ಮತ್ತು ಜ್ಞಾನದ ಸದ್ಬಳಕೆ ನೆರವಿನಿಂದ ಫಿಜಿಯೋಥೆರಪಿಗೆ ಬಲವಾದ ಅಡಿಪಾಯ ಒದಗಿದೆ ಎಂದು ನವದೆಹಲಿಯ ಏಮ್ಸ್‌ನ ಹಿರಿಯ ಫಿಜಿಯೋ ಥೆರಪಿಸ್ಟ್ ಡಾ.ಎ. ಸರವಣ ಮೂರ್ತಿ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಡಾ. ಶಿವರಾತ್ರಿ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ಕಾಲೇಜ್ ಆಫ್ ಫಿಜಿಯೋಥೆರಪಿ ವತಿಯಿಂದ ಆಯೋಜಿಸಿದ್ದ ‘ಫಿಜಿಯೋಥೆರಪಿ ಈಗಿನ ಚಿಕಿತ್ಸಾ ವಿಧಾನ ಮತ್ತು ಭವಿಷ್ಯ’ ಕುರಿತು ಎರಡು ದಿನಗಳ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಫಿಜಿಯೋಥೆರಪಿ ರಂಗದ ಭವಿಷ್ಯ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆ. ವಿಜ್ಞಾನದ ಜತೆಗೆ ಸಂಪ್ರದಾಯಿಕ ತಾಂತ್ರಿಕತೆ, ರೋಗಿಗಳ ಮೇಲಿನ ನಮ್ಮ ಕಾಳಜಿಯೂ ಮುಖ್ಯವಾಗುತ್ತದೆ. ನಮ್ಮ ವೃತ್ತಿಯ ಜತೆ ನಾವು ಹೆಚ್ಚು ಬೆಸೆದುಕೊಳ್ಳಬೇಕು. ಫಿಜಿಯೋ ಥೆರಫಿ ತಜ್ಞರು ತಮ್ಮ ಬಳಿ ಬಂದವರ ನೋವಿಗೆ ಚಿಕಿತ್ಸೆ ನೀಡದೆ, ನೋವಿನ ಮೂಲ ಗುರುತಿಸಿ ಚಿಕಿತ್ಸೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಹೃದಯ ಸಂಬಂಧಿ, ನರಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೈಹಿಕ ಸಮಸ್ಯೆಗಳಿಗೆ ಈಗ ಫಿಜಿಯೋ ಥೆರಪಿ ಬಹಳ ಅಗತ್ಯವಾಗಿದೆ. ಇದಲ್ಲದೇ ಕಾರ್ಪೊರೇಟ್ ಜಗತ್ತಿನಲ್ಲೂ ಫಿಜಿಯೋ ತಜ್ಞರಿಗೆ ಬಹಳ ಬೇಡಿಕೆ ಇದೆ. ಒಂದೇ ಕಡೆ ಕುಳಿತು ದಿನಗಟ್ಟಲೆ ಕೆಲಸ ಮಾಡುವ ಟೆಕ್ಕಿಗಳಿಗೆ ಬೆನ್ನು ಸಂಬಂಧಿ ಸಮಸ್ಯೆ ಅಧಿಕವಾಗಿದೆ. ಇದರಿಂದ ಅವರ ಕೆಲಸದಲ್ಲಿ ವಿಳಂಬವಾಗುತ್ತಿದೆ. ಐಟಿ ಸಂಸ್ಥೆಗಳು ಟೆಕ್ಕಿಗಳ ಆರೋಗ್ಯ ಪಾಲನೆ ದೃಷ್ಟಿಯಿಂದ ಫಿಜಿಯೋ ಥೆರಪಿಸ್ಟ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಾರ್ವಜನಿಕ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುವ ಶಕ್ತಿ ನಮಗಿದೆ. ವ್ಯಕ್ತಿಗಳ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು, ಗಾಯ ಮುಂತಾದವುಗಳಿಂದ ರೋಗಿಗಳು ಚೇತರಿಸಿಕೊಳ್ಳುತ್ತಾರೆ. ನಮ್ಮ ವೃತ್ತಿಯು ರೋಗಿಯ ಒಳ ಸಮಸ್ಯೆ ಗುಣಪಡಿಸುವುದಲ್ಲದೆ, ಜೀವನದ ಗುಣಮಟ್ಟ ಸುಧಾರಿಸಿ ಆರೋಗ್ಯವನ್ನೂ ಸುಸ್ಥಿತಿಯಲ್ಲಿ ಇರಿಸುತ್ತದೆ. ಫಿಜಿಯೋಥೆರಪಿ ಇಲ್ಲದೆ ವೈದ್ಯಕೀಯ ಕ್ಷೇತ್ರ ಪೂರ್ಣಗೊಳ್ಳದು ಎಂಬಂತಾಗಿದೆ ಎಂದು ಡಾ.ಎ. ಸರವಣಮೂರ್ತಿ ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕವಿತಾ ರಾಜಾ, ಉಪ ಪ್ರಾಂಶುಪಾಲರಾದ ಡಾ. ರೇಣುಕಾದೇವಿ, ಪ್ರೊ.ವಿಜಯ್ ಸ್ಯಾಮ್ಯುಯಲ್ ರಾಜ್ ಇದ್ದರು.