ರಕ್ತದಾನದಿಂದ ದೈಹಿಕ, ಮಾನಸಿಕ ಆರೋಗ್ಯ ಸುಸ್ಥಿರ

Physical and mental health is sustained by donating blood
ವಿಜಯಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ, ಸ್ವಯಂ ಸೇವಕರ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ. ಎಸ್.ಜಿ. ರೂಡಗಿ, ಡಾ. ಎ.ಐ. ಹಂಜಗಿ, ಡಾ. ಚಂದ್ರಕಾಂತ ಬಿ ಇತರರಿದ್ದರು.
Published on

ವಿಜಯಪುರ: ರಕ್ತದಾನ ಎಲ್ಲ ದಾನಗಳಲ್ಲಿ ಅತಿ ಶ್ರೇಷ್ಠ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಪ್ರಾಣ ಉಳಿಸಬೇಕು. ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿರವಾಗಿರುತ್ತದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಜಿಲ್ಲಾ ಚೇರ್ಮನ್ ಪ್ರೊ .ಎಸ್.ಜಿ. ರೂಡಗಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್ ಘಟಕದಡಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಮತ್ತು ಸ್ವಯಂ ಸೇವಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಶಕ್ತ, ಸದೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು. ಪ್ರವಾಹ, ಅಪಘಾತ ಮತ್ತು ಇನ್ನಿತರ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ರಕ್ತ ಹೆಚ್ಚು ಅಗತ್ಯವಾಗಿರುತ್ತದೆ. ಯುವಕರು ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು.

ಇಡೀ ಸಮಾಜಕ್ಕೆ ಹೆಮ್ಮಾರಿಯಾಗಿ ಕಾಡುತ್ತಿರುವ ಎಚ್‌ಐವಿ ಮತ್ತು ಏಡ್ಸ್ ನಂತಹ ಮಾರಕ ರೋಗಗಳಿಂದ ದೂರವಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎ.ಐ. ಹಂಜಗಿ ಮಾತನಾಡಿ, ವಿದ್ಯಾರ್ಥಿಗಳು ಎನ್.ಎಸ್.ಎಸ್, ರೆಡ್ ಕ್ರಾಸ್‌ನಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವಾ ಮನೋಭಾವದ ಗುಣವನ್ನು ಬೆಳೆಸಿಕೊಳ್ಳಬೇಕು.

ರಕ್ತದಾನ ಮಾಡಿ ರಾಷ್ಟ್ರಕ್ಕಾಗಿ ತಮ್ಮ ಅಳಿಲು ಸೇವೆ ಸಲ್ಲಿಸಬೇಕು. ಈ ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ, ನನಗೆ ಏನೆಲ್ಲವನ್ನು ನೀಡಿದ ಈ ಸಮಾಜಕ್ಕೆ ನಾನೇನು ಕೊಡುಗೆ ನೀಡಬಲ್ಲೆನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.

ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ. ಚಂದ್ರಕಾಂತ. ಬಿ ಅವರು ರೆಡ್ ಕ್ರಾಸ್ ಘಟಕ ಧ್ಯೇಯೋದ್ಧೇಶ, ಮಹತ್ವ ಮತ್ತು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ವಿಶಾಲಾಕ್ಷ್ಮೀ ಹೊನ್ನಕಟ್ಟಿ ನಿರೂಪಿಸಿದರು. ಕಾಲೇಜಿನ ಎಲ್ಲ ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು. ಸುಮಾ ಬಿರಾದಾರ ಪ್ರಾರ್ಥಿಸಿದರು. ಪ್ರೊ. ಅಲಿಯಾ ಮುಲ್ಲಾ ಸ್ವಾಗತಿಸಿದರು. ಡಾ. ಅಜ್ರಾ ಅರವೀನ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಪ್ರೊ. ಎಂಎಸ್. ಖೊದ್ನಾಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net