ಹೌದು ಆ ಫೋಟೋ ನನ್ನದೆ, ಆದರೆ.... ರಾಹುಲ್​ ಆರೋಪಕ್ಕೆ ಸ್ಪಷ್ಟನೆ ನೀಡಿದ ಬ್ರೆಜಿಲ್​ ಮಾಡೆಲ್​ | Brazilian Model

Larissa
Published on

ದೆಹಲಿ: ಬುಧವಾರ ( ನ 5) ಪತ್ರಿಕಾಗೋಷ್ಠಿಯಲ್ಲಿ ಬ್ರೆಜಿಲ್‌ನ ಮಾಡೆಲ್ (Brazilian Model) ಒಬ್ಬಳ ಫೋಟೋ ಪ್ರದರ್ಶಿಸಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದು ಹರಿಯಾಣದ ಮತದಾರರ ಪಟ್ಟಿಯಲ್ಲಿ 22 ಬಾರಿ ಕಾಣಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು.

ಆ ಫೋಟೋದಲ್ಲಿರುವ ಲಾರಿಸ್ಸಾ ಎನ್ನಲಾದ ಮಹಿಳೆ ಸಧ್ಯ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದು, ಆ ಚಿತ್ರವು ತನ್ನ ಆರಂಭಿಕ ಮಾಡೆಲಿಂಗ್ ದಿನಗಳ ಹಳೆಯ ಸ್ಟಾಕ್ ಫೋಟೋ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರತದ ರಾಜಕಾರಣಕ್ಕು, ನನಗೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ನನ್ನ ಆ ಚಿತ್ರವನ್ನು ಬೇರೆ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಲಾಗಿದೆ ಮತ್ತು ನನ್ನ ಒಪ್ಪಿಗೆ ಇಲ್ಲದೆ ಬಳಸಲಾಗಿದೆ. ನಾನು ಭಾರತಕ್ಕೆ ಹೋಗಿಲ್ಲ ಎಂದು ವೀಡಿಯೊದಲ್ಲಿ ಸ್ಪಷ್ಟಪಡಿಸಿದರು. ನಾನು ಬ್ರೆಜಿಲಿಯನ್ ಡಿಜಿಟಲ್ ಇನ್‌ಫ್ಲುಯೆನ್ಸರ್ ಮತ್ತು ಕೇಶ ವಿನ್ಯಾಸಕಿ ಎಂದು ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ತಾನು ಈಗ ಮಾಡೆಲ್ ಅಲ್ಲ ಎಂದಿರುವ ಲಾರಿಸ್ಸಾ, ರಾಹುಲ್ ಗಾಂಧಿ ಆಕೆಯ ಫೋಟೋವನ್ನು ಬಳಸಿದ ಬಳಿಕ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್​​ನಲ್ಲಿ, ಅದರಲ್ಲೂ ವಿಶೇಷವಾಗಿ ಭಾರತ ಮೂಲದ ಬಳಕೆದಾರರ ಪ್ರತಿಕ್ರಿಯೆಗಳೇ ತುಂಬಿ ತುಳುಕುತ್ತಿವೆ ಎಂದಿದ್ದಾರೆ.

ಲಾರಿಸ್ಸಾ, ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿರುವವರಿಗೆ ಧನ್ಯವಾಧಗಳನ್ನು ತಿಳಿಸುವುದರೊಂದಿಗೆ ನಾನು ಭಾರತಕ್ಕೆ ಬಂದಿಲ್ಲ, ನನ್ನ ಫೋಟೋವನ್ನು ಮಾತ್ರ ಬಳಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿ ಆರೋಪವೇನು..?

2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ, ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಮತ್ತು 19.26 ಲಕ್ಷ ಬೃಹತ್ ಮತದಾರರು ಸೇರಿದ್ದಾರೆ ಇದರ ಅರ್ಥ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ, ಅಂದರೆ ಶೇಕಡಾ 12.5 ರಷ್ಟು, ಇದರ ಉದ್ದೇಶವೇ ಮೊಸದ ಮೂಲಕ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಾಗಿತ್ತು ಎಂದರು. ಹರಿಯಾಣ ಚುನಾವಣೆಯ ದಿನ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಗೆಲುವಿನ ಭವಿಷ್ಯ ನುಡಿದಿದ್ದವು, ಆದರೆ ಫಲಿತಾಂಶ ಬದಲಾಗಿ ಬಿಜೆಪಿ ಗೆಲುವು ಸಾಧಿಸಿವೆ ಎಂದರು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಮಾಧ್ಯಮಗಳ ಮುಂದೆ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿರುವ ವೀಡಿಯೊವನ್ನು ಸಹ ಪ್ರದರ್ಶಿಸಿದರು.

ಚುನಾವಣಾ ಆಯೋಗವು ಮನಸ್ಸು ಮಾಡಿದರೆ ಒಂದು ಸೆಕೆಂಡಿನಲ್ಲಿ ನಕಲಿ ಮತದಾರರನ್ನು ತೆಗೆದುಹಾಕಬಹುದು. ಆದರೆ ಅವರು ಏಕೆ ಅದನ್ನು ಮಾಡುತ್ತಿಲ್ಲ? ಕಾರಣ ಸ್ಪಷ್ಟ, ಅವರು ಬಿಜೆಪಿಗೆ ಸಹಾಯ ಮಾಡುತಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಂದೇ ರೀತಿಯ ಚಿತ್ರಗಳಿಗೆ ವಿಭಿನ್ನ ಹೆಸರುಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ನಿದರ್ಶನಗಳನ್ನು ತೋರಿಸಿದರು.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net