

ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರು ಜಗತ್ತಿನ ಆದ್ಯ ದಾರ್ಶನಿಕ ಸೂತ್ರಕಾರರು. ಅವರು ಬೋಧಿಸಿದ ಪಡ್ವಿಡಿ, ವೃಷ್ಟಿ , ಲಂಬನ, ಮುಕ್ತಾಗುಚ್ಚ, ಮತ್ತು ಪಂಚವರ್ಣ ಇವುಗಳೇ ಆ ಪಂಚ ದಾರ್ಶನಿಕ ಸೂತ್ರಗಳು. ರಂಭಾಪುರೀ ಪೀಠದ ಶ್ರೀ ಜಗದ್ಗುರು ರೇಣುಕ ಭಗವದ್ಪಾರು ಮಹಾಮಹಿಮಾಶಾಲಿಯಾದ ಅಗಸ್ಱ ಮಹರ್ಷಿಗೆ ಬೋಧಿಸಿದ ಸೂತ್ರವೇ ಪಡ್ವಿಡಿ, ಅಥವಾ ಪದ್ವಿಧಿ ಸೂತ್ರ. ಈ ಸೂತ್ರದಲ್ಲಿ ರೇಣುಕ ಭಗವತ್ಪಾದರು ಪರಮ ಪದವನ್ನು ಪಡೆದುಕೊಳ್ಳುವ ವಿಧಿ ವಿಧಾನಗಳನ್ನು ಬೋಧಿಸಿದ್ದಾರೆ.
ಉಜ್ಜಯಿನಿ ಪೀಠದ ಶ್ರೀಜಗದ್ಗುರು ದಾರುಕ ಭಗವದ್ಪಾದರು ಮಹಾತ್ಯಾಗಿಯಾದ ದಧೀಚಿ ಮಹರ್ಷಿಗೆ ಬೋಧಿಸಿದ ಸೂತ್ರವೇ ವೃಷ್ಟಿ ಸೂತ್ರ. ಮಳೆಯ ಹನಿಗಳ ರೂಪದಲ್ಲಿ ಭೂಮಿಗೆ ಬಿದ್ದ ಜೀವಿಗಳು 84 ಲಕ್ಷ ಪ್ರಕಾರದ ಶರೀರಗಳನ್ನು ಧರಿಸುವ ಜೀವವಿಜ್ಞಾನವನ್ನು ಈ ಸೂತ್ರದಲ್ಲಿ ಬೋಧಿಸಲ್ಪಟ್ಟಿದೆ. ಕೇದಾರ ಪೀಠದ ಶ್ರೀಜಗದ್ಗುರು ಘಂಟಾಕರ್ಣ ಭಗವದ್ಪಾದರು ವ್ಯಾಸ ಮಹರ್ಷಿಗೆ ಬೋಧಿಸಿದ ಸೂತ್ರವೇ ಲಂಬನ ಸೂತ್ರ.
ಈ ಸೂತ್ರದಲ್ಲಿ ತಟಸ್ಥ ಲಕ್ಷಣದ ಮುಖಾಂತರ ಈಶ್ವರನ ವಿರಾಟ್ ರೂಪವು ಪ್ರತಿಪಾದಿಸಲ್ಪಟ್ಟಿದೆ. ಶ್ರೀಶೈಲ ಪೀಠದ ಶ್ರೀಜಗದ್ಗುರು ಧೇನುಕರ್ಣ ಭಗವತ್ಪಾದರು ಸಾನಂದ ಮಹರ್ಷಿಗಳಿಗೆ ಬೋಧಿಸಿದ ಸೂತ್ರವೇ ಮುಕ್ತಾಗುಚ್ಛ ಸೂತ್ರ. ಈ ಸೂತ್ರದಲ್ಲಿ ಜಗತ್ತು 36 ತತ್ವಗಳೆಂಬ ಮುತ್ತಿನ ಗೊಂಚಲು ಎಂಬುದನ್ನು ತಿಳಿಸಿದ್ದಾರೆ. ಕಾಶೀಪೀಠದ ಶ್ರೀ ಜಗದ್ಗುರು ವಿಶ್ವಕರ್ಣ ಭಗವತ್ಪಾದರು ದೂರ್ವಾಸ ಮಹರ್ಷಿಗಳಿಗೆ ಬೋಧಿಸಿದ ಸೂತ್ರವೇ ಪಂಚವರ್ಣ ಸೂತ್ರ. ಶಿವ ಏವಾತ್ಮಾ ಎಂಬ ಪಂಚ ಅಕ್ಷರಾತ್ಮಕವಾದ ಈ ಸೂತ್ರದಲ್ಲಿ ಆತ್ಮನು ಶಿವಸ್ವರೂಪನೇ ಎಂಬುದಾಗಿ ತಿಳಿಸಿ ಮುಕ್ತಿಯ ಮಹಾ ಮಾರ್ಗವನ್ನು ಪ್ರತಿಪಾದಿಸಿದ್ದಾರೆ.