ಮಾಸ್ಕ್​ನಿಂದ ನಂಬರ್​ ಪ್ಲೇಟ್ ಮುಚ್ಚಿ ಓಡಾಡುತ್ತಿದ್ದ ಬೈಕ್​ ಸವಾರನಿಗೆ ಕಾದಿತ್ತು ಬಿಗ್​ ಶಾಕ್​​!

Mask
Published on

ಹೈದರಾಬಾದ್​: ಮುಖಕ್ಕೆ ಧರಿಸುವ ಮಾಸ್ಕ್​ನಿಂದ ಬೈಕ್​ ನಂಬರ್​ ಪ್ಲೇಟ್ ಕಾಣದಂತೆ​ ಮುಚ್ಚಿ ತಿರುಗಾಡುತ್ತಿದ್ದ ಸವಾರನ ವಿರುದ್ಧ ಹೈದರಾಬಾದಿನ ಪಂಜಗುಟ್ಟ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂತಹ ಪ್ರಕರಣ ಇದೇ ಮೊದಲೇನಲ್ಲ. ಕೇವಲ ಒಂದು ತಿಂಗಳಲ್ಲಿ 4 ಪ್ರಕರಣಗಳು ವರದಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್​ ಸವಾರನನ್ನು ಸರ್ಫಜ್​ ಖಾನ್​ ಎಂದು ಗುರುತಿಸಲಾಗಿದೆ. ಈತ ಆಸಿಫ್​ ನಗರದ ನಿವಾಸಿ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ 420 ಮತ್ತು 511 ಸೆಕ್ಷನ್​ ಅಡಿಯಲ್ಲಿ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗಿದ್ದು, ಬಂಧನ ಭೀತಿಯು ಎದುರಾಗಿದೆ.

ಈ ಬಗ್ಗೆ ಮಾತನಾಡಿರುವ ಪಂಜಗುಟ್ಟ ಸಂಚಾರಿ ಠಾಣಾ ಇನ್ಸ್​ಪೆಕ್ಟರ್​ ಎಂ. ರವಿ, ಆರೋಪಿಯು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯನ್ನು ಮಂಗಳವಾರ ಸಂಜೆ ಹೈದರಾಬಾದ್​ನ ಸೋಮಾಜಿಗುಡದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದ್ದಾರೆ.

ಟ್ರಾಫಿಕ್​ ದಂಡದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗೇ ಮಾಸ್ಕ್​ನಿಂದ ನಂಬರ್​ ಪ್ಲೇಟ್​ ಮುಚ್ಚಿ ಓಡಾಡುತ್ತಿದ್ದ. ಇದೀಗ ಬೈಕ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ರವಿ ಹೇಳಿದರು. (ಏಜೆನ್ಸೀಸ್​)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net