ಹಣಕ್ಕಾಗಿ ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ!

pg
Published on

ಹಾಸನ: ಪಿಜಿ (ಪೇಯಿಂಗ್​ ಗೆಸ್ಟ್) ಬಾಡಿಗೆ ನೀಡಿಲ್ಲ ಎಂದು ವಿದ್ಯಾರ್ಥಿನಿಯರಿಬ್ಬರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ಇಲ್ಲಿನ ಕುವೆಂಪುನಗರ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ನಗರದ ಎನ್.ಡಿ.ಆರ್.ಕೆ. ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಮೈಸೂರು ಮೂಲದ ಯುವತಿಯರಿಬ್ಬರು ಕುವೆಂಪುನಗರ ಬಡಾವಣೆಯ ಪಿಜಿಯೊಂದರಲ್ಲಿ ಇದ್ದರು. ಯುಗಾದಿ ಹಬ್ಬಕ್ಕೆಂದು ಮೈಸೂರಿನ ಮನೆಗೆ ತೆರಳಿದಾಗ ಕರೊನಾ ಲಾಕ್​ಡೌನ್​ ಘೋಷಣೆಯಾಗಿತ್ತು. ಹಾಗಾಗಿ ಅವರು ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ. ಮೈಸೂರಿನ್ಲಲೇ ಉಳಿದುಕೊಂಡಿದ್ದರು.

ಪಿಜಿಯಲ್ಲಿಟ್ಟಿದ್ದ ಬಟ್ಟೆ, ಪುಸ್ತಕ ತೆಗೆದುಕೊಂಡು ಹೋಗಲು ನಿರ್ಧರಿಸಿದ ಯುವತಿಯರಿಬ್ಬರು ಮೈಸೂರಿನಿಂದ ಟ್ಯಾಕ್ಸಿಯಲ್ಲಿ ಗುರುವಾರ ಬೆಳಗ್ಗೆ ಹಾಸನಕ್ಕೆ ಬಂದಿದ್ದಾರೆ. ಆದರೆ, ಲಾಕ್​ಡೌನ್​ ಅವಧಿಯ ಎರಡು ತಿಂಗಳ ಬಾಡಿಗೆ ಹಣ ನೀಡುವಂತೆ ತಾಕೀತು ಮಾಡಿದ ಪಿಜಿ ಮಾಲೀಕ, ಹಣ ಕೊಡದೆ ಹೊರ ಹೋಗವಂತಿಲ್ಲ ಎಂದು ಪಿಜಿಗೆ ಬೀಗ ಹಾಕಿದ್ದ.

ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೂ ತಿಂಡಿಯಿಲ್ಲದೆ ಯುವತಿಯರು ಪಿಜಿಯಲ್ಲೇ ಲಾಕ್ ಆಗಿರುವ ವಿಷಯ ತಿಳಿದ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯುವತಿಯರನ್ನು ಪಿಜಿಯಿಂದ ಬಿಡುಗಡೆ ಮಾಡಿಸಿ ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net