

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ಮಂಡನೆಗೂ ಮೊದಲೇ ಈ ಬಾರಿ ರೈತಪರ ಆಯವ್ಯಯ ಮಂಡನೆ ಮಾಡಲಾಗುವುದು ಎಂದು ಹೇಳಿದ್ದರು. ಇಂದು ಒಂದು ಗಂಟೆ ಮೊದಲೇ ಹಸಿರು ಶಾಲು ಹೊದ್ದು ವಿಧಾನಸಭೆಗೆ ಆಗಮಿಸಿದ ಯಡಿಯೂರಪ್ಪನವರು 11ಗಂಟೆಗೆ ಬಜೆಟ್ ಪ್ರತಿ ಓದಲು ಶುರು ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮಾರ್ಗದಲ್ಲೇ ನಮ್ಮ ಬಜೆಟ್ ಇದೆ. ಮೋದಿ ಆಶಯದಂತೆ ರೈತರ ಆದಾಯ ದುಪ್ಪಟ್ಟು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ನಮ್ಮ ಸರ್ಕಾರ ಆರಂಭದಲ್ಲೇ ಬರ ಮತ್ತು ಪ್ರವಾಹವನ್ನು ಎದುರಿಸಿದೆ. ಸಂತ್ರಸ್ತರಿಗೆ ಪ್ರವಾಹವನ್ನೂ ಸಮರ್ಪಕವಾಗಿ ವಿತರಿಸಲಾಗಿದೆ. ಬೆಳೆಹಾನಿಯನ್ನು ಎದುರಿಸಿದ ರೈತರಿಗೆ ತಲಾ 10 ಸಾವಿರ ರೂ.ನೀಡಲಾಗಿದೆ ಎಂದು ತಿಳಿಸಿದರು. ಹಾಗೇ ಪ್ರವಾಹದಿಂದ ಹಾನಿಗೊಳಗಾಗದ ಕುಟುಂಬಗಳಿಗೆ ತಲಾ 5 ಲಕ್ಷ ರೂ.ನೀಡಲಾಗಿದೆ ಎಂದರು.
ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಯೋಜನೆ ಹಾಗೇ ಮುಂದುವರಿಯಲಿದೆ ಎಂದು ಘೋಷಿಸಿದ ಯಡಿಯೂರಪ್ಪನವರು ಅಬಕಾರಿ ಸುಂಕವನ್ನು ಶೇ.6ರಷ್ಟು ಹೆಚ್ಚಳ ಮಾಡಲಾಗುವುದು. ಇಂಧನದ ಮೇಲಿನ ಸೆಸ್ ಶೇ.32ರಿಂದ 35ಕ್ಕೆ ಏರಿಸಲಾಗುವುದು. ಪೆಟ್ರೋಲ್ 1.60 ರೂ. ಹಾಗೂ ಡೀಸೆಲ್ 1.59 ರೂ.ಏರಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.